ಬೆಂಗಳೂರು (ಆ.15): “ಸ್ವಾತಂತ್ರ್ಯವೆಂದರೆ, ಅದು ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯ. ಒಬ್ಬರನ್ನೊಬ್ಬರು ಗೌರವಿಸುವ, ಸರ್ವರ ಘನತೆಯನ್ನು ಕಾಯುವ, ಮನುಷತ್ವ ಮೂಲಭೂತ ಹಕ್ಕುಗಳು ಮತ್ತು ನ್ಯಾಯವನ್ನು ಎತ್ತಿ ಹಿಡಿಯುವ ಆದರ್ಶ. ಸಾಮಾಜಿಕ ಭದ್ರತೆ, ಗುಣಮಟ್ಟದ ಬದುಕು, ಮಾನವ ಸಮಾನತೆ, ಸ್ತ್ರೀಯರನ್ನು ಗೌರವಿಸುವ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುವ ಉದಾತ್ತ ತತ್ವ”. ಇಂತಹ ಸ್ವಾತಂತ್ರ್ಯವನ್ನು ಸಾಧಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸದಾ ಶ್ರಮಿಸುತ್ತದೆ.
ಸಮ್ಮಿಶ್ರ ಸರ್ಕಾರದ ಸಾಲಮನ್ನಾ ವಿಚಾರದಲ್ಲಿ ರೈತರ ಆತ್ಮಬಲವನ್ನು ಹೆಚ್ಚಿಸಿದೆ. ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಸಿಎಂ ಎಚ್ಡಿ ಕುಮಾರಸ್ವಾಮಿ ಸ್ವಾತಂತ್ರ್ಯ ದಿನದಂದು ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು.
72ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನಡೆಸಿ, ನಾಡಿನ ಸಮಸ್ತ ಜನತೆಗೆ ಶುಭಾಶಯ ಕೋರಿದರು. ಗೌರವವಂದನೆ ಸ್ವೀಕರಿಸಿದ ಬಳಿಕ ರಾಜ್ಯವನ್ನು ಉದ್ದೇಶಿಸಿ ಮಾತನಾಡಿದ ಅವರು ನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದರು.
ಅಖಂಡ ಕರ್ನಾಟಕ ನಮ್ಮ ಧ್ಯೇಯ: ಉತ್ತರ ಕರ್ನಾಟಕ ಕೇಂದ್ರೀಕರಿಸಿ ಮಾತನಾಡಿದ ಅವರು ಕರ್ನಾಟಕ ಏಕೀಕರಣದ ಫಲವಾಗಿ ನಮಗೆ ಅಖಂಡ ಕರ್ನಾಟಕ ಲಭ್ಯವಾಗಿದೆ. ಈ ಅಖಂಡ ಕರ್ನಾಟಕ ಅಸ್ಮಿತೆ ನಮ್ಮ ಧ್ಯೇಯ ವಾಗಿದ್ದು, ಅದಕ್ಕೆ ಧಕ್ಕೆಬಾರದಂತೆ ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು
ರೈತರ ವಿಷಯದಲ್ಲಿ ರಾಜಕೀಯ ಬೇಡ: ಸಮ್ಮಿಶ್ರ ಸರ್ಕಾರ ರೈತರ 49 ಸಾವಿರ ಕೋಟಿ ರೂ.ಸಾಲಮನ್ನಾ ಮಾಡಲು ತೀರ್ಮಾನಿಸಿದೆ. ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ರೈತ ಸಾಲ ಮನ್ನಾ ಮಾಡಿಲ್ಲ. ರೈತರ ವಿಚಾರವಾಗಿ ರಾಜಕೀಯ ಮಾಡಬಾರದು. ಈಗಾಗಲೇ ಸಹಕಾರಿ ಬ್ಯಾಂಕ್ ನ 20 ಲಕ್ಷದ 38 ಸಾವಿರ ರೈತರು ಲಾಭ ಪಡೆಯಲಿದ್ದಾರೆ. ವಾಣಿಜ್ಯ ಬ್ಯಾಂಕ್ ಗಳಲ್ಲಿನ ಸಾಲ ಮನ್ನಾ ಮಾಡಲು ಆದೇಶ ಹೊರಡಿಸಲಾಗುತ್ತದೆ ಎಂದರು.
ರೈತ ಸ್ಪಂದನೆ ಯೋಜನೆ:ರೈತರನ್ನು ಚಿಂತೆಯಿಂದ ಮುಕ್ತಗೊಳಿಸಬೇಕೆಂದು ನಮ್ಮ ಸರ್ಕಾರ ಪ್ರಯತ್ನ ಪಟ್ಟಿದೆ. ಇದೇ ಉದ್ದೇಶದಿಂದ ರೈತ ಸ್ಪಂದನ ಕಾರ್ಯಕ್ರಮ ರೂಪಿಸಲು ಹೊಸ ಚಿಂತನೆ ರೂಪಿಸಿದ್ದೇವೆ. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಮುಂದಾಗಬಾರದು ಎಂದು ಮನವಿ ಮಾಡಿದ ರು. ರೈತರ ಆತ್ಮಹತ್ಯೆ ವಿಷಯ ಕೇಳಿದಾಗ ನಮ್ಮ ಮನೆ ಸದಸ್ಯನನ್ನೇ ಕಳೆದುಕೊಂಡ ಅನುಭವವಾಗುತ್ತದೆ. ಈ ನಿರ್ಧಾರಕ್ಕೆ ಯಾರು ಕೂಡ ಮುಂದಾಗಬಾರದು ಎಂದರು.
ಇಸ್ರೇಲ್ ಮಾದರಿ ನೀರಾವರಿ ಯೋಜನೆಗ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಅನುಷ್ಠಾನಕ್ಕೆ ತರಲು ಕ್ರಮಕ್ಕೆ ಮುಂದಾಗಲಾಗುವುದು ಈ ಮೂಲಕ ರೈತರ ಬದುಕು ಹಸನಕ್ಕೆ ಪ್ರಯತ್ನಿಸಲಾಗುವುದು ಎಂಧರು
ಎರೋ ಇಂಡಿಯಾ ಸ್ಥಳಾಂತರಕ್ಕೆ ವಿರೋಧ: ಏರೋ ಇಂಡಿಯಾ ಶೋ ಸ್ಥಳಾಂತರ ವಿಚಾರವಾಗಿ ರಾಜ್ಯದಲ್ಲಿ ಪ್ರತಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರಧಾನಿಗೆ ಹಾಗೂ ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದೇನೆ. ಸಾರ್ವಜನಿಕರ ಅಭಿಪ್ರಾಯಕ್ಕೆ ಕೇಂದ್ರ ಸ್ಪಂದಿಸುವ ನಿರೀಕ್ಷೆ ಇದೆ ಎಂದರು.
ಬ್ರಾಂಡ್ ಬೆಂಗಳೂರು ಅಭಿವೃದ್ಧಿಗೆ ಪ್ರಾಮುಖ್ಯತೆ: ರಾಜ್ಯದಲ್ಲಿ ಆಡಳಿತಕ್ಕೆ ಕಾಯಕಲ್ಪ ನೀಡಲಾಗುತ್ತದೆ. ಹಸಿರು ಕರ್ನಾಟಕ ಯೋಜನೆಯಡಿ ಅರಣ್ಯ ಬೆಳವಣಿಗೆಗೆ ಒತ್ತು ನೀಡಲಾಗುದು. ಇನ್ನು ಬ್ರಾಂಡ್ ಬೆಂಗಳೂರು ಕುರಿತು ಮಾತನಾಡಿದ ಅವರು, ಬೆಂಗಳೂರಿಗರಿಗೆ ಸ್ಪಚ್ಛತೆಯ ಕರೆ ನೀಡಿದರು. 2ನೇ ಹಂತ ಮೆಟ್ರೋವನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
“ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ”. ಕನ್ನಡಿಗರು ಶಾಂತಿ ಪ್ರಿಯರು. ಸಹಿಷ್ಣುಗಳು, ಸಂಯಮಿಗಳು. ಅತ್ಯುತ್ತಮ ಕಾನೂನು ಸುವ್ಯವಸ್ಥೆ ಹೊಂದಿರುವ ರಾಜ್ಯ ನಮ್ಮದು. ಸಮಾಜ ಘಾತುಕ ಕೃತ್ಯಗಳನ್ನು ಎಂದೆಂದಿಗೂ ಸಹಿಸುವುದಿಲ್ಲ. ರಾಜ್ಯದಲ್ಲಿ ಶಾಂತಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳ ಉನ್ನತೀಕರಣ, ಪೊಲೀಸ್ ಐಟಿ ತಂತ್ರಾಂಶದಲ್ಲಿ ಸುಧಾರಣೆ, ಪೊಲೀಸ್ ವೈಡ್ ಏರಿಯಾ ನೆಟ್‍ವರ್ಕ್‍ನ ಬಲವರ್ಧನೆ ಹಾಗೂ ಪೊಲೀಸ್ ವ್ಯವಸ್ಥೆಯ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ರಾಜ್ಯದ ಜನರ ಭದ್ರತೆಯ ವಿಷಯದಲ್ಲಿ ಸರ್ಕಾರ ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಅಭಯವನ್ನು ಜನತೆಗೆ ನೀಡಲು ಇಚ್ಛಿಸುತ್ತೇನೆ. `ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ’ ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ, ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ, ಜಗಜ್ಯೋತಿ ಬಸವೇಶ್ವರರ ಈ ವಚನ ನಮ್ಮ ಆದರ್ಶ. ಅರಿವಿನ ಕೊರತೆಯನ್ನು ನಿವಾರಿಸಿ, ಬೆಳಕಿನ ಹೊನಲು ಹರಿಸಿ ಪ್ರಾಮಾಣಿಕವಾದೊಂದು, ಪ್ರಬುದ್ಧವಾದೊಂದು ನಾಡು ಕಟ್ಟುವುದು ನಮ್ಮ ಗುರಿ.
ಮಹಾತ್ಮಾ ಗಾಂಧೀಜೀಯವರು ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಮಾತನಾಡುತ್ತ ಹೇಳುತ್ತಾರೆ, , “My nation of Democracy is that, under it, the weakest shall have the same opportunities as the strongest?. ಈ ಮಾತು ನಮಗೆ ಸದಾ ಸ್ಫೂರ್ತಿ. ಪ್ರತಿ ಹಳ್ಳಿಯ ಜನರೂ ಭಾಗಿಯಾಗಬಹುದಾದ ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆ ನಮ್ಮದಾಗಬೇಕು. ಅತ್ಯಂತ ದುರ್ಬಲನಿಗೂ ಅವಕಾಶ ದೊರೆಯುವಂತಾಗಬೇಕು. ಅಂತಿಮವಾಗಿ ಒಂದು ಪುಟ್ಟ ಕಥೆಯನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಆಫ್ರಿಕಾದ ಪಾದ್ರಿಯೊಬ್ಬರು ಬುಡಕಟ್ಟು ಹುಡುಗರಿಗೆ ಪಂದ್ಯವಾಡಿಸುತ್ತಾರೆ. ಸಾಲಾಗಿ ನಿಂತ ಮಕ್ಕಳ ಮುಂದೆ ನೂರು ಮೀಟರ್ ಅಂತರದಲ್ಲಿ ಸಿಹಿತಿಂಡಿಗಳ ಬುಟ್ಟಿ ಇಡುತ್ತಾರೆ. ಪಂದ್ಯದಲ್ಲಿ ಓಡಿ, ಮೊದಲು ಬುಟ್ಟಿ ಮುಟ್ಟುವ ಮಗುವಿಗೆ ಎಲ್ಲ ಸಿಹಿ ತಿಂಡಿ. ` Run’ ಎಂದು ಪಾದ್ರಿಗಳು ಸೂಚಿಸಿದಾಕ್ಷಣ. ಮಕ್ಕಳು ಓಡಲಾರಂಭಿಸುತ್ತಾರೆ ಆದರೆ ಒಂಟಿಯಾಗಿ ಅಲ್ಲ. ಜಂಟಿಯಾಗಿ. ಪರಸ್ಪರ ಕೈ ಕೈ ಹಿಡಿದು ಒಟ್ಟಾಗಿ ಬುಟ್ಟಿ ಮುಟ್ಟುತ್ತಾರೆ. ಸಿಹಿ ಎಲ್ಲರ ಪಾಲಾಗುತ್ತದೆ. ಹೀಗೇಕೆ ಮಾಡಿದಿರಿ? ಪಾದ್ರಿಗಳ ಪ್ರಶ್ನೆ. ಅದಕ್ಕೆ ಮಕ್ಕಳ ಉತ್ತರ UBUNTU – ಉಬುಂಟು !
`ಉಬುಂಟು’ ಎಂದರೆ ಆಫ್ರಿಕಾದಲ್ಲಿ “ನಾವೆಲ್ಲರೂ ಒಟ್ಟಾಗಿ ಇರುವುದರಿಂದ ನಾನಿದ್ದೇನೆ” ಎಂದರ್ಥ. I am because we are. How can one be happy when the others are sad ? ಒಬ್ಬನೇ ಸಿಹಿ ತಿಂದಲ್ಲಿ ಖುಷಿ ಎಲ್ಲಿ! ಇದು ಪಾದ್ರಿಗೆ ಮಕ್ಕಳ ಉತ್ತರ. ಕಥೆ ಪುಟ್ಟದು. ಆದರೆ, ಆಶಯ ವಿಶಾಲ. ಈ ವೈಶಾಲ್ಯತೆಯನ್ನು ನಮ್ಮದಾಗಿಸಿಕೊಳ್ಳೋಣ. “ಕರ್ನಾಟಕ ಅಭಿವೃದ್ಧಿಯ ರಥಕ್ಕೆ ಚಕ್ರವಾಗೋಣ! ಅಭಿವೃದ್ಧಿಯ ಫಲವನ್ನು ಎಲ್ಲರೂ ಅನುಭವಿಸೋಣ! ನಮಸ್ಕಾರ. ಜೈ ಹಿಂದ್, ಜೈ ಕರ್ನಾಟಕ ಎಂದು ಹೇಳುತ್ತಾ ಸಿಎಂ ಕುಮಾರಸ್ವಾಮಿ ಅವರು ತಮ್ಮ ಭಾಷಣವನ್ನು ಮುಗಿಸಿದ್ದಾರೆ.