janadhvani

Kannada Online News Paper

ಹಜ್-2018: ಮಿನಾದಲ್ಲಿ ಸಕಲ ಸಿದ್ದತೆಗಳೊಂದಿಗೆ ಡೇರೆಗಳು ಸಿದ್ದ

ಮಿನಾ: ಮೀನಾ ನಗರಕ್ಕೆ ವಿಶ್ವದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಹಜ್ಜಾಜ್‌ಗಳಿಗೆ ಉಳಿದುಕೊಳ್ಳಲು ಡೇರೆಗಳು ಸಿದ್ಧಗೊಂಡಿದೆ. ಮಕ್ಕಾದ ಪೂರ್ವದಲ್ಲಿ ಐದು ಕಿ.ಮೀ. ದೂರದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಡೇರೆಗಳನ್ನು ಸ್ಥಾಪಿಸಲಾಗಿದೆ.
ಆಧುನಿಕ ಸೌಕರ್ಯಗಳೊಂದಿಗೆ ಡೇರೆಗಳ ನವೀಕರಣವನ್ನು ತಿಂಗಳ ಹಿಂದೆಯೇ ಪ್ರಾರಂಭಿಸಲಾಗಿತ್ತು.ಈ ಬಾರಿಯ ಹಜ್ ಕರ್ಮ ವೇಳೆ ಸೆಖೆಯಾಗಿರುವುದರಿಂದ ಬಿಸಿಲ ತಾಪದಿಂದ ರಕ್ಷಿಸಲು ವಾಟರ್ ಸ್ಪ್ರೇ ಮತ್ತು ತಂಪಾಗುವ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಹಜ್ಜಾಜ್‌ಗಳನ್ನು ಸ್ವೀಕರಿಸಲು ಹಜ್ ಸಚಿವಾಲಯವು ಸಕಲ ಸಿದ್ದತೆಗಳನ್ನು ಪೂರ್ಣಗೊಳಿಸಿದೆ.
ಮಿನ, ಅರಫಾ, ಮುಝ್ದಲಿಫಾ ಮುಂತಾದೆಡೆ ಕುಡಿಯುವ ನೀರಿನ ಕೊಳವೆಗಳ ಕಾಮಗಾರಿಯನ್ನು ದುರಸ್ತಿಗೊಳಿಸಲಾಗಿದ್ದು, ಏರ್ ಕಂಡಿಷನರ್ ರಿಪೇರಿಯನ್ನೂ ಪೂರ್ಣಗೊಳಿಸಲಾಗಿದೆ.

ಇಪ್ಪತ್ನಾಲ್ಕು ಗಂಟೆಗಳೂ ವೈದ್ಯಕೀಯ ಕ್ಲಿನಿಕ್, ಆಧುನಿಕ ಸೌಕರ್ಯಗಳ ಆಸ್ಪತ್ರೆಗಳು, ಜಂರಾದಲ್ಲಿ ಏರ್ ಆಂಬುಲೆನ್ಸ್, ತುರ್ತು ಸಂದರ್ಭಗಳಲ್ಲಿ ಸೌದಿ ರೆಡ್ ಕ್ರಸೆಂಟ್‌ನ ಏರ್ ಆಂಬುಲೆನ್ಸ್ ಕಾರುಗಳು, ವಿಶೇಷ ವಾಹನಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಆಂತರಿಕ ಯಾತ್ರಿಗಳ ರಕ್ಷಣೆಯ ವಿಶೇಷ ಭದ್ರತೆಗಾಗಿ 4500 ಭದ್ರತಾ ಸಿಬ್ಬಂದಿಗಳು ಇರುತ್ತಾರೆ. ಅಲ್ಲದೆ 1000 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ.

ಮಿನಾದ ಡೇರೆಗಳಲ್ಲಿ ಪ್ರಥಮ ಬಾರಿಗೆ ಡಬಲ್ ಡೆಕ್ಕರ್ ಮಂಚಗಳನ್ನು ಸ್ಥಾಪಿಸಲಾಗಿದೆ. ಹೆಚ್ಚು ಭದ್ರತೆಯೊಂದಿಗೆ ಹಾಸಿಗೆಗಳನ್ನು ಸ್ಥಾಪಿಸಲಾಗಿದ್ದು, ದಕ್ಷಿಣ ಏಷ್ಯಾದ ದೇಶಗಳಿಂದ ಬರುವ ಯಾತ್ರಾರ್ಥಿಗಳಿಗೆ ಈ ವರ್ಷ ಈ ಸೌಕರ್ಯವನ್ನು ಒದಗಿಸಲಾಗುತ್ತದೆ. ಯಶಸ್ವಿಯಾದರೆ, ಮುಂಬರುವ ವರ್ಷಗಳಲ್ಲಿ ಹೆಚ್ಚು ಡೇರೆಗಳಲ್ಲಿ ಇದನ್ನು ಬಳಸಲಾಗುವುದು.

ಮೀನಾದಲ್ಲಿ ದಾರಿತಪ್ಪುವ ಹಜ್ಜಾಜ್ ಗಳನ್ನು ಡೇರೆಗಳಿಗೆ ತಲುಪಿಸಲು ಸೌದಿ ಅರೇಬಿಯಾದ ವಿವಿಧ ಶಾಲಾ ಕಾಲೇಜ್ ಗಳ 4500 ಸ್ಕೌಟ್ ಸದಸ್ಯರು ದುಲ್ ಹಜ್ 14 ರವರೆಗೆ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲಿದ್ದಾರೆ.

ಪವಿತ್ರ ಹಜ್ ಯಾತ್ರೆಗಾಗಿ ಮಕಾಕ್ಕೆ ಬರುವ ಯಾತ್ರಿಕರಿಗೆ ಸೇವೆ ಸಲ್ಲಿಸಲು ಮತ್ತು ಮಾರ್ಗದರ್ಶನ ನೀಡಲು ತರಬೇತಿ ಪಡೆದ ರಿಸಾಲಾ ಸ್ಟಡೀ ಸರ್ಕಲ್(RSC) ಮತ್ತು ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಹಜ್ ಸ್ವಯಂಸೇವಕರು ಸದಾ ಸಕ್ರಿಯರಾಗಿರುತ್ತಾರೆ.

ಜನದಟ್ಟನೆಯನ್ನು ನಿಯಂತ್ರಿಸುವ ಸಲುವಾಗಿ ಬೇರೆ ಬೇರೆ ದೇಶಗಳಿಗೆ ಮತ್ತು ದೇಶೀಯ ಯಾತ್ರಾರ್ಥಿಗಳಿಗೆ ಜಂರಗಳಿಗೆ ಕಲ್ಲೆಸೆಯುವ ವಿವಿಧ ಸಮಯಗಳನ್ನು ಕ್ರಮೀಕರಿಸಲಾಗಿದೆ.

ಮೀನಾ ಮತ್ತು ಜಂರಗಳಲ್ಲಿ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ವಿವಿಧ ಬಧ್ರತಾ ವ್ಯವಸ್ಥೆ ಗಳನ್ನು ಕಲ್ಪಿಸಲಾಗಿದೆ .

error: Content is protected !! Not allowed copy content from janadhvani.com