ಕಲ್ಲಿಕೋಟೆ: ಇಸ್ಲಾಂ ಧರ್ಮದ ಪ್ರಮಾಣ ಪವಿತ್ರ ಖುರ್ ಅನ್ ದುರ್ವ್ಯಾಖ್ಯಾನ ಮಾಡಿ ಇಸ್ಲಾಮಿನ ಮೂಲ ಆಶಯಗಳಿಗೆ ಧಕ್ಕೆ ತರುವ ಎಲ್ಲಾ ನೂತನವಾದಿ ಪಂಥ ಗಳೊಂದಿಗೆ ಬಹಿರಂಗ ಸಂವಾದಕ್ಕೆ ಸಿದ್ಧ ಎಂದು ಮರ್ಕಝ್ ರೂವಾರಿ, ಅಂತರರಾಷ್ಟ್ರೀಯ ಖ್ಯಾತಿಯ ವಿದ್ವಾಂಸ, ಅಖಲಿ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಖಮರುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದ್ದಾರೆ.
ಕಲ್ಲಿಕೋಟೆ ಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂತಪುರಂ, ನೂತನವಾದಿ ಚಿಂತನೆ ಗಳಿಂದುಂಟಾಗುವ ಎಲ್ಲಾ ರೀತಿಯ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸುನ್ನೀ ಸಂಘಟನೆಗಳು ದೇಶದಾದ್ಯಂತ ಸಂಘಟಿತ ಜಾಗೃತಿ ಮೂಡಿಸಲಿವೆ.
ಉಗ್ರವಾದಿ ನಿಲುವಿನ ಗುಂಪುಗಳನ್ನು ನಿಷೇಧಿಸಬೇಕೋ ಬೇಡವೋ ಎಂಬುದನ್ನು ಆಯಾ ಸರಕಾರಗಳು ತೀರ್ಮಾನಿಸಬೇಕು.
ಉಗ್ರವಾದಿ ನಿಲುವಿನ ಗುಂಪುಗಳನ್ನು ನಿಷೇಧ ಮಾಡಿದಾಗ ಹೊಸ ಹೆಸರಲ್ಲಿ ಪ್ರತ್ಯಕ್ಷವಾಗಿ ತಮ್ಮ ಚಾಳಿಯನ್ನು ಮುಂದುವರಿಸಿದ್ದನ್ನು ಈ ಹಿಂದೆಯೂ ನೋಡಿದ್ದೇವೆ.
ಆದ್ದರಿಂದ ಅವುಗಳ ವಿರುದ್ಧ ಸಂಬಂಧ ಪಟ್ಟ ಸರಕಾರಗಳು, ನ್ಯಾಯಾಲಯಗಳು ಕಠಿಣ ನಿಲುವನ್ನು ತಾಳಬೇಕು.
ಇಸ್ಲಾಂ ಧರ್ಮದ ಹೆಸರಿನಲ್ಲಿ ಭಯೋತ್ಪಾದನಾ ಚಟುವಟಿಕೆ,ವಿಧ್ವಂಸಕ ಕೃತ್ಯಗಳನ್ನು ಮಾಡಿದರೆ ಅದನ್ನು ಮುಸ್ಲಿಮರು ಬೆಂಬಲಿಸದೆ ಕಠಿಣವಾದ ರೀತಿಯಲ್ಲಿ ವಿರೋಧಿಸಬೇಕು.
ಪವಿತ್ರ ಖುರ್ ಆನನ್ನು ಮೊದಲು ದುರ್ವ್ಯಾಖ್ಯಾನ ಮಾಡಿದ್ದು ಸಲಪಿ ಪಂಥ ವಾಗಿದೆ.
ಅದನ್ನು ಅನುಸರಿಸಿ ನೂತನವಾದ ಹಾಗೂ ಉಗ್ರ ನಿಲುವು ಪ್ರಚುರ ಪಡಿಸುತ್ತಿರುವ ಗುಂಪುಗಳು ಜಿಹಾದ್ ನಂಥಾ ಸೂಕ್ಷ್ಮ ವಿಷಯಗಳನ್ನು ದುರ್ವ್ಯಾಖ್ಯಾನ ಮಾಡಿ ಮಾನವರ ನಡುವೆ ಕಂದಕ ಸೃಣ್ಟಿಸಿ ತಮ್ಮ ಬೇಳೆ ಬೇಯಿಸಲು ಹವಣಿಸುತ್ತಿವೆ.
ಕ್ಯಾಂಪಸ್ ರಾಜಕೀಯ ನಿಷೇಧಿಸುವ ಬದಲು ಸಹಪಾಠಿ ಗಳ ನಡುವೆ ಪರಸ್ಪರ ನಂಬಿಕೆ ಉಂಟುಮಾಡುವ ರಾಜಕೀಯ ಜಾಗೃತಿ ಮೂಡಿಸಬೇಕಿದೆ.
ನೈತಿಕ ಮೌಲ್ಯಗಳನ್ನು ಎತ್ತಿಹಿಡಿದು ಪರಸ್ಪರ ಸಹಬಾಳ್ವೆ ನಡೆಸುವ ಪಾಠಗಳನ್ನು ಬೋಧಿಸಲು ಶಿಕ್ಷಣ ಸಂಸ್ಥೆಗಳು ಮುಂದೆ ಬರಬೇಕಾದದ್ದು ವರ್ತಮಾನ ಕಾಲದ ಅನಿವಾರ್ಯತೆಯಾಗಿದೆ ಎಂದು ಕಾಂತಪುರಂ ಹೇಳಿದರು.