ವಾಷಿಂಗ್ಟನ್: ಟ್ರಂಪ್ ಆಡಳಿತದ ಇರಾನ್ ಮೇಲಿನ ದಾಳಿ ಮತ್ತು ವಲಸೆ ವಿರೋಧಿ ನೀತಿಗಳ ವಿರುದ್ಧ ಅಮೆರಿಕದಲ್ಲಿ ವ್ಯಾಪಕ ಪ್ರತಿಭಟನೆ. ಅಮೆರಿಕದಾದ್ಯಂತ ಹಮ್ಮಿಕೊಳ್ಳಲಾಗಿದ್ದ ‘ನೋ ಕಿಂಗ್ಸ್’ (No Kings) ಪ್ರತಿಭಟನಾರ್ಯಾಲಿಗಳಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದಾರೆ.
ದೇಶಾದ್ಯಂತ 3,100 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಪ್ರತಿಭಟನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅಮೆರಿಕ ಮಾತ್ರವಲ್ಲದೆ ಫ್ರಾನ್ಸ್, ಪೋರ್ಚುಗಲ್, ಜರ್ಮನಿ, ಇಟಲಿ ಮತ್ತು ಗ್ರೀಸ್ ದೇಶಗಳಲ್ಲೂ ಪ್ರತಿಭಟನಾ ರ್ಯಾಲಿಗಳು ನಡೆದವು. ಮಿನ್ನೇಸೋಟದಲ್ಲಿ ನಡೆದ ರ್ಯಾಲಿಯು ಜನಸಂದಣಿಯಿಂದಾಗಿ ಜಾಗತಿಕ ಮಾಧ್ಯಮಗಳ ಗಮನ ಸೆಳೆಯಿತು. ಇಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಕ್ಯಾಲಿಫೋರ್ನಿಯಾ, ಟೆನ್ನೆಸ್ಸೀ, ಓಹಿಯೋ, ನ್ಯೂಜೆರ್ಸಿ, ಡೆಲವೇರ್, ಫ್ಲೋರಿಡಾ, ಟೆಕ್ಸಾಸ್ ಮತ್ತು ವಾಷಿಂಗ್ಟನ್ ಡಿಸಿ ಸೇರಿದಂತೆ ವಿವಿಧೆಡೆ ನಡೆದ ರ್ಯಾಲಿಗಳಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು.
ಶನಿವಾರ ನಡೆದ ಈ ಪ್ರತಿಭಟನೆಯಲ್ಲಿ ಟ್ರಂಪ್, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಇತರ ಉನ್ನತ ಅಧಿಕಾರಿಗಳ ಪ್ರತಿಕೃತಿಗಳನ್ನು ದಹಿಸಲಾಯಿತು. ಮಿನ್ನೇಸೋಟದ ಸೇಂಟ್ ಪಾಲ್ನಲ್ಲಿ ನಡೆದ ರ್ಯಾಲಿಯಲ್ಲಿ ರಾಜ್ಯ ಗವರ್ನರ್ ಟಿಮ್ ವಾಲ್ಜ್, ಸೆನೆಟರ್ ಬರ್ನಿ ಸ್ಯಾಂಡರ್ಸ್, ನಟಿ ಜೇನ್ ಫೋಂಡಾ ಮತ್ತು ಸಂಸದೆ ಇಲ್ಹಾನ್ ಒಮರ್ ಅವರಂತಹ ಪ್ರಮುಖರು ಭಾಗವಹಿಸಿದ್ದರು. ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಅಮೆರಿಕನ್ ರಾಕ್ ಗಾಯಕ ಬ್ರೂಸ್ ಸ್ಪ್ರಿಂಗ್ಸ್ಟೀನ್ ಕೂಡ ಮಿನ್ನೇಸೋಟದ ರ್ಯಾಲಿಯಲ್ಲಿ ಭಾಗವಹಿಸಿ ಹಾಡುಗಳನ್ನು ಹಾಡಿದರು.
‘ನೋ ಕಿಂಗ್ಸ್’ ಚಳವಳಿಯನ್ನು ಅಮೆರಿಕದ ಇತಿಹಾಸದಲ್ಲೇ ನಡೆದ ಅತಿದೊಡ್ಡ ಪ್ರತಿಭಟನೆ ಎಂದು ಪರಿಗಣಿಸಲಾಗಿದೆ. “ಮುಖವಾಡ ಧರಿಸಿದ ರಹಸ್ಯ ಪೊಲೀಸರು ನಮ್ಮ ಜನರನ್ನು ಭಯೋತ್ಪಾದಕರನ್ನಾಗಿ ಮಾಡುತ್ತಿದ್ದಾರೆ. ಅಕ್ರಮ ಮತ್ತು ವಿನಾಶಕಾರಿ ಯುದ್ಧವು ನಮ್ಮನ್ನು ಅಪಾಯಕ್ಕೆ ತಳ್ಳುತ್ತಿದೆ ಹಾಗೂ ನಮ್ಮ ಖರ್ಚುಗಳನ್ನು ಹೆಚ್ಚಿಸುತ್ತಿದೆ. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ, ನಾಗರಿಕ ಹಕ್ಕುಗಳು ಮತ್ತು ಮತದಾನದ ಹಕ್ಕುಗಳನ್ನು ಪ್ರಶ್ನಿಸಲಾಗುತ್ತಿದೆ. ಏರುತ್ತಿರುವ ಜೀವನ ವೆಚ್ಚವು ಕುಟುಂಬಗಳನ್ನು ಸಂಕಷ್ಟಕ್ಕೆ ಈಡುಮಾಡಿದೆ. ಟ್ರಂಪ್ ನಮ್ಮ ಮೇಲೆ ಸರ್ವಾಧಿಕಾರಿಯಂತೆ ಆಳಲು ಬಯಸುತ್ತಿದ್ದಾರೆ. ಇದು ಅಮೆರಿಕ, ಇಲ್ಲಿ ಅಧಿಕಾರ ಜನರಿಗಿದೆ – ರಾಜರಾಗಲು ಬಯಸುವವರಿಗಲ್ಲ ಅಥವಾ ಅವರ ಕೋಟ್ಯಾಧಿಪತಿಗಳಿಗಲ್ಲ,” ಎಂದು ‘ನೋ ಕಿಂಗ್ಸ್’ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಟ್ರಂಪ್ ಅವರ ಏಕಪಕ್ಷೀಯ ಆಡಳಿತ ಶೈಲಿಯ ವಿರುದ್ಧ ಈ ಪ್ರತಿಭಟನೆಗಳು ಪ್ರಬಲ ಎಚ್ಚರಿಕೆಯಾಗಿದ್ದವು. ಇರಾನ್ನಲ್ಲಿನ ಮಿಲಿಟರಿ ಕ್ರಮ ಮತ್ತು ತದನಂತರ ಉಂಟಾದ ಬಿಕ್ಕಟ್ಟುಗಳು ಜನರಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ. ಶಾಂತಿಯನ್ನು ಮರುಸ್ಥಾಪಿಸಬೇಕು ಮತ್ತು ಯುದ್ಧದಿಂದ ಹಿಂದೆ ಸರಿಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇದರೊಂದಿಗೆ, ಟ್ರಂಪ್ ಅವರ ವಲಸೆ ವಿರೋಧಿ ನೀತಿಗಳು ಮತ್ತು ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್ಫೋರ್ಸ್ಮೆಂಟ್ (ICE) ದೇಶಾದ್ಯಂತ ನಡೆಸುತ್ತಿರುವ ಕ್ರೂರ ದಾಳಿಗಳು ಹಾಗೂ ಸಾಮೂಹಿಕ ಗಡಿಪಾರು ಕ್ರಮಗಳ ವಿರುದ್ಧವೂ ಆಕ್ರೋಶ ಭುಗಿಲೆದ್ದಿದೆ. ಜನವರಿಯಲ್ಲಿ ಮಿನ್ನೇಸೋಟದಲ್ಲಿ ನಡೆದ ಪ್ರತಿಭಟನೆಯ ವೇಳೆ ಫೆಡರಲ್ ಏಜೆಂಟ್ಗಳ ಗುಂಡಿನ ದಾಳಿಗೆ ಇಬ್ಬರು ಅಮೆರಿಕನ್ ನಾಗರಿಕರು ಬಲಿಯಾದ ಘಟನೆಯು ಈ ಪ್ರತಿಭಟನೆಯ ತೀವ್ರತೆಯನ್ನು ಹೆಚ್ಚಿಸಿದೆ.







