ಟೆಲ್ ಅವಿವ್/ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮುಂದುವರಿಯುತ್ತಿರುವ ಬೆನ್ನಲ್ಲೇ, ಇರಾನ್ ಇಸ್ರೇಲ್‌ಗೆ ಭಾರಿ ತಿರುಗೇಟು ನೀಡಿದೆ. ನಿನ್ನೆಯಿಂದ ಆರಂಭವಾದ ಸಂಘರ್ಷದಲ್ಲಿ ಇಸ್ರೇಲ್‌ನಲ್ಲಿ ಗಾಯಗೊಂಡವರ ಸಂಖ್ಯೆ 500ಕ್ಕೇರಿದೆ. ಗಾಯಗೊಂಡ 456 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಸ್ರೇಲಿ ಆಂಬ್ಯುಲೆನ್ಸ್ ವಿಭಾಗ ತಿಳಿಸಿದೆ. ಇದರ ಬೆನ್ನಲ್ಲೇ ಟೆಹ್ರಾನ್ ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಇಸ್ರೇಲ್ ವ್ಯಾಪಕ ಪ್ರತಿದಾಳಿ ನಡೆಸಿದೆ. ಏಳು ಸ್ಥಳಗಳಲ್ಲಿ ದಾಳಿ ಮುಂದುವರಿದಿದೆ ಎಂದು ಇಸ್ರೇಲಿ ಮಾಧ್ಯಮಗಳು ಸ್ಪಷ್ಟಪಡಿಸಿವೆ.
“ಇರಾನ್‌ನ ಹೃದಯಭಾಗವನ್ನು ನಾವು ಧ್ವಂಸಗೊಳಿಸಲಿದ್ದೇವೆ” ಎಂದು ಘೋಷಿಸಿದ ಬಳಿಕ ಇಸ್ರೇಲ್ ಟೆಹ್ರಾನ್ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿತು. ಈ ದಾಳಿಯಲ್ಲಿ ಟೆಹ್ರಾನ್‌ನ ಅರಮನೆ ಮತ್ತು ನ್ಯಾಯಾಲಯದ ಸಂಕೀರ್ಣಗಳು ಧ್ವಂಸಗೊಂಡಿವೆ. ಇರಾನ್ ರಕ್ಷಣಾ ಸಚಿವ ಬ್ರಿಗೇಡಿಯರ್ ಜನರಲ್ ಅಝೀಝ್ ನಾಸರ್ ಝಾದೆ ಮತ್ತು ಮೇಜರ್ ಜನರಲ್ ಅಬ್ದುಲ್ ರಹೀಮ್ ಮೂಸವಿ ಹತರಾಗಿದ್ದಾರೆ ಎಂದು ಇರಾನ್ ಖಚಿತಪಡಿಸಿದೆ. ಶನಿವಾರ ಬೆಳಿಗ್ಗೆ ರಕ್ಷಣಾ ಮಂಡಳಿಯ ಸಭೆ ನಡೆಯುತ್ತಿದ್ದಾಗ ಯುಎಸ್ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇವರು ಕೊಲ್ಲಲ್ಪಟ್ಟಿದ್ದಾರೆ.
ಯುಎಸ್ ಸಹಯೋಗದೊಂದಿಗೆ ಇಸ್ರೇಲ್ ನಿನ್ನೆ ಟೆಹ್ರಾನ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಆಯತುಲ್ಲಾಹ್ ಅಲಿ ಖಮಾನೈ ಅವರು ಹತರಾದ ಬೆನ್ನಲ್ಲೇ ಯುದ್ಧ ತೀವ್ರಗೊಂಡಿದೆ. ಪರಮೋನ್ನತ ನಾಯಕನ ನಿಧನಕ್ಕೆ ಇರಾನ್‌ನಲ್ಲಿ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಏಳು ದಿನಗಳ ಕಾಲ ಕಚೇರಿಗಳಿಗೆ ರಜೆ ನೀಡಲಾಗಿದೆ. ಖಮಾನೈ ಅವರ ಪುತ್ರಿ, ಅಳಿಯ ಮತ್ತು ಮೊಮ್ಮಗ ಕೂಡ ದಾಳಿಯಲ್ಲಿ ಮೃತಪಟ್ಟಿದ್ದಾರೆ. ನಾವು ಒಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದ್ದೇವೆ ಮತ್ತು ಖಮನೈ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ಸ್ (IRGC) ತಿಳಿಸಿದೆ.
ಖಮನೈ ಅವರು ಮೃತಪಟ್ಟಿರುವ ಸುದ್ದಿಯನ್ನು ಇರಾನ್ ಇಂದು ಬೆಳಿಗ್ಗೆ ಅಧಿಕೃತವಾಗಿ ಖಚಿತಪಡಿಸಿದೆ. 1989 ರಿಂದ ಇರಾನ್‌ನ ಪರಮೋನ್ನತ ನಾಯಕರಾಗಿದ್ದಾರೆ ಆಯತುಲ್ಲಾಹ್ ಅಲಿ ಖಮನೈ.






