janadhvani

Kannada Online News Paper

‘ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ಪ್ರೀತಿಯ ಅಣ್ಣನ ಖಬರಿನ ಬಳಿ ತಂಗಿಯ ಸಲಾಂ

ಇದು ಸರತಿಯ ಸಾಲು. ಪ್ರತಿ ಸೆಕೆಂಡಿನಲ್ಲೂ ಮನುಷ್ಯನು ಅಲ್ಲಾಹನೆಡೆಗೆ ಸಾಗುವ ತಯಾರಿಯಲ್ಲಿರಬೇಕು ಎಂಬ ಸಂದೇಶಗಳನ್ನು ಇಂತಹಾ ಮರಣಗಳು ನಮಗೆ ನೀಡುತ್ತಲೇ ಇವೆ.

ಮೊನ್ನೆ ನವೆಂಬರ್ 26 ಬುಧವಾರ ದಂದು ಮರಣ ಹೊಂದಿದ ಮಿತ್ರ ಜಲಾಲುದ್ದೀನ್ ಹುಮೈದಿಯವರ ಖಬರ್ ಝಿಯಾರತ್ತಿಗೆ ಅವರ ಮರಣದ ಆರನೇ ದಿನ ಹೋಗಿದ್ದೆ. ಅವರನ್ನೊಮ್ಮೆ ಝಿಯಾರತ್ ಮಾಡಿ ಬರೋಣ ಎಂದು ನನ್ನ ಮಕ್ಕಳು ತೀವ್ರ ಒತ್ತಾಯಿಸಿದ್ದರಿಂದ ಅತ್ತ ಸಾಗಿದ್ದೆ. ಝಿಯಾರತ್ ಮಾಡುತ್ತಿರುವಾಗ ಸಂಜೆ ವೇಳೆ ಮದರಸಾಕ್ಕೆ ಬಂದ ಅವರ ತಂಗಿ ಅಣ್ಣನ ಖಬರ್ ಬಳಿ ಬಂದು ಮೇಲಿನ ಮಾತು ಹೇಳಿದ್ದಳು.’ಬೆಲ್ಯೆಚ್ಚ ಅಸ್ಸಲಾಮು ಅಲೈಕುಂ’ ನಿಜಕ್ಕೂ ಕರುಳು ಕಿತ್ತು ಬಂದಂತಾಗಿತ್ತು. ತನ್ನ ಪ್ರೀತಿಯ ಅಣ್ಣನ ಖಬರ್ ಮುಟ್ಟಿ ಆ ಮಗು ಹೇಳಿದ ಸಲಾಂ ಈಗಲೂ ನನ್ನ ಕಿವಿಯಲ್ಲಿ ಅಪ್ಪಳಿಸಿದಂತಿದೆ.

ತನ್ನ ಅನೇಕಾರು ಕನಸುಗಳಿಗೆ ಜೀವ ತುಂಬುವ ಮೊದಲೇ ಅಲ್ಲಾಹನು ಅವರನ್ನು ತನ್ನೆಡೆಗೆ ಆಹ್ವಾನಿಸಿದ್ದನು. ಮನುಷ್ಯ ಬದುಕೇ ಹೀಗೆ. ಯಾರು ಎಲ್ಲಿ ಯಾವಾಗ ಎನ್ನಲಾಗದು. ಇದು ಸರತಿಯ ಸಾಲು. ಪ್ರತಿ ಸೆಕೆಂಡಿನಲ್ಲೂ ಮನುಷ್ಯನು ಅಲ್ಲಾಹನೆಡೆಗೆ ಸಾಗುವ ತಯಾರಿಯಲ್ಲಿರಬೇಕು ಎಂಬ ಸಂದೇಶಗಳನ್ನು ಇಂತಹಾ ಮರಣಗಳು ನಮಗೆ ನೀಡುತ್ತಲೇ ಇವೆ. ಉಮರ್ ರಳಿಯಲ್ಲಾಹು ಅನ್ಹು ಹೇಳಿದಂತೆ ‘ದಿನಾಲು ಅವರು ಮರಣ ಹೊಂದಿದರು ಇವರು ಮರಣ ಹೊಂದಿದರು ಎಂದು ಹೇಳುತ್ತಲೇ ಇದ್ದೇವೆ. ಆದರೆ ಒಂದು ದಿನ ಖಂಡಿತವಾಗಿಯೂ ಜನರು ಹೇಳುವರು,ಉಮರ್ ಕೂಡಾ ಮರಣ ಹೊಂದಿದರೆಂದು’
ಹುಮೈದಿಯವರು ಆಸ್ಪತ್ರೆಯಲ್ಲಿದ್ದು ಕೊನೆಯ ಸಮಯ ಅವರು ಉಸಿರಾಟದ ತೀವ್ರ ಸಮಸ್ಯೆ ಎದುರಿಸಿದ್ದರು. ಆ ವೇಳೆ ಅವರನ್ನು ಐಸಿಯು ಗೆ ಪುನಹ ಶಿಫ್ಟ್ ಮಾಡುತ್ತಿದ್ದಾಗ ತನ್ನ ಎರಡು ವರ್ಷದ ಮಗು ಬಿಲಾಲನ್ನು ಅದೆಷ್ಟು ಬಾರಿ ಅವರು ಚುಂಬಿಸಿದ್ದರೆಂದು ಹೇಳಲಾಗದು ಎನ್ನುತ್ತಿದ್ದರು ಅವರ ಮನೆಯವರು. ಇದು ತನ್ನ ಮಗುವಿನೊಂದಿಗಿನ ಕೊನೆಯ ಭೇಟಿ ಎಂದು ಅವರು ಆ ವೇಳೆ ಊಹಿಸಿರಬಹುದೋ ಏನೋ.!

ಅವರನ್ನು ಗುರುವಾರ ಸಂದರ್ಶಿಸಲು ಭಾವಿಸಿದ್ದ ಅವರ ಸಹಪಾಠಿ ಮುಅಲ್ಲಿಂಗಳೊಂದಿಗೆ ಗುರುವಾರ ತನಕ ಕಾಯದಿರಿ,ಮೊದಲೇ ಬನ್ನಿ ಅಂದಿದ್ದರು.ಹಾಗೆ ಅವರು ಬುಧವಾರವೇ ಸಂದರ್ಶಿಸಿದ್ದರು.ಅವರು ಹೇಳಿದಂತೆ ಮರುದಿನ ಬೆಳಿಗ್ಗೆ ಕಂಡಿಷನ್ ಕ್ರಿಟಿಕಲ್ ಆಗಿ ಅವರನ್ನು ಮತ್ತೆ ಐಸಿಯು ವಿಗೆ ಶಿಫ್ಟ್ ಮಾಡಲಾಗಿತ್ತು. ಮರುದಿನ ಹೋದ ಯಾರಿಗೂ ಅವರನ್ನು ಕಾಣಲಾಗಿರಲಿಲ್ಲ. ಎಲ್ಲವೂ ದೇವರ ವಿಧಿಗಳು. ತನ್ನ ಕಂದಮ್ಮನೊಂದಿಗೆ ಹೆಚ್ಚು ಸಮಯ ಬೆರೆತು ಸಂತೋಷವನ್ನು ಪಡೆಯಲಾಗದ ಅವರನ್ನು ಸಂತೈಸಲು ಸ್ವರ್ಗೀಯಾರಾಮವು ಕಾಯುತ್ತಿರಬಹುದು ಎಂದು ಭಾವಿಸೋಣ.

ಏನಿದ್ದರೂ, ಇಹಲೋಕವೆಂಬುದು ನಶ್ವರ ತಾನೇ. ಇಲ್ಲಿ ಯಾರಿಗೆ ಯಾವ ಸುಖಗಳು ನಿತ್ಯವಾಗಿರುತ್ತದೆ ಹೇಳಿ. ಆರೋಗ್ಯದ ಬಳಿಕ ರೋಗ ಬರುವ ಯೌವ್ವನದ ಬಳಿಕ ಮುಪ್ಪು ಆವರಿಸುವ, ಜೀವನದ ಬಳಿಕ ಮರಣ ಬರುವ ಈ ಬದುಕಿಗೆ ಏನು ಅರ್ಥವಿದೆ.!? ಆದ್ದರಿಂದ ಶಾಸ್ವತ ಸುಖದ ಸ್ವರ್ಗ ಮತ್ತು ಅಲ್ಲಾಹನ ತೃಪ್ತಿಯೇ ನಿಜವಾದ ಖುಷಿ.”ಹಿಯ‌ ಜನ್ನತುನ್ ತ್ವಾಬತ್ ವತ್ವಾಬ ನಈಮುಹಾ…ವನಈಮುಹಾ ಬಾಖಿನ್ ವಲೈಸ ಬಿಫಾನೀ”ಅನಶ್ವರ ಅನುಗ್ರಹಗಳ ಬೀಡು ಸ್ವರ್ಗವೇ ಸತ್ಯವಿಶ್ವಾಸಿಯ ಗೇಹ.
ಇಂದು ಮಗ್ರಿಬ್ ಹೊತ್ತು ಹನಫೀ ಸಹೋದರರೊಬ್ಬರು ಬಂದು ಕೇಳಿದರು ‘ಇಲ್ಲಿ ಅಝಾನ್ ಕೊಡುತ್ತಿದ್ದ ಒಬ್ಬರಿದ್ದರಲ್ಲಾ ಅವರು ಎಲ್ಲಿ ಹೋದರು.?’ ಅಪಘಾತವೊಂದರಲ್ಲಿ ಗಾಯ ಗೊಂಡು ಇತ್ತೀಚೆಗೆ ಅವರು ತೀರಿ ಹೋದರು ಎಂದಾಗ ಅವರ ಕಣ್ಣು ತುಂಬುವುದನ್ನು ಕಂಡೆ. ಅಯ್ಯೋ ಅವರ ಶ್ರವಣ ಸುಂದರ ಅಝಾನ್ ಕೇಳಲು ಖುಷಿಯಾಗುತ್ತಿತ್ತು.ಅವರ ಅಝಾನ್ ಕೇಳಿಯೇ ಬೆಳಿಗ್ಗೆ ನಾವು ಎಚ್ಚರವಾಗುತ್ತಿದ್ದೆವು ಎನ್ನುತ್ತಾ ಅವರು ಗದ್ಗದಿತರಾದರು.

ಹುಮೈದಿಯವರು ಊರಿಂದ ಬಂದು ಮುಅಲ್ಲಿಂ ಮೆಹರ್ಜಾನಿಗೆ ತೆರಳುವ ಮಧ್ಯೆ ಹೇಳುತ್ತಿದ್ದರಂತೆ,ತುಂಬಾ ಹಸಿವಾಗುತ್ತಿದೆ ಏನಾದರೂ ತಿನ್ನ ಬಹುದಿತ್ತು ಎಂದು.ನಂತರ ಸ್ವಲ್ಪ ಸಮಯದಲ್ಲೇ ಅವರಿಗೆ ಅಪಘಾತವಾಗಿತ್ತು.ಆ ಬಳಿಕ ಅವರು ಏನೂ ತಿನ್ನುವಂತಿರಲಿಲ್ಲ.ನೀರು ಕೂಡಾ ಹೊರಗಿಂದ ನೀಡುವಂತಿರಲಿಲ್ಲ.ತನ್ನ ಸಹೋದರನೊಂದಿಗೆ ಪ್ಲೀಸ್..ಪ್ಲೀಸ್ ಸ್ವಲ್ಪ ನೀರು ನೀಡು ಎನ್ನುತ್ತಲಿದ್ದರಂತೆ.ಆದರೆ ವೈದ್ಯರ ನಿರ್ದೇಶನದಂತೆ ಅವರಿಗೆ ನೀರು ಕೊಡುವಂತಿರಲಿಲ್ಲ.ಇವೆಲ್ಲವನ್ನೂ ನೆನಪಿಸುವಾಗ ದುಃಖ ಉಮ್ಮಳಿಸಿ ಬರುತ್ತದೆ.ಆದರೂ ಯಾರು ಎಷ್ಟು ತಿನ್ನಬೇಕು ಕುಡಿಯಬೇಕು ಎಂಬುದು ಅಲ್ಲಾಹನ ನಿಶ್ಚಯ ತಾನೇ.ಅಲ್ಲಿ ನಮ್ಮದೇನಿದ್ದರೂ ಅಸಹಾಯಕತೆ ಮಾತ್ರ.ಕೋಟಿ ಕೋಟಿ ಶ್ರೀಮಂತರನೇಕರು ಒಂದು ಗುಟುಕು ನೀರೂ ಒಳ ತೆಗೆಯಲಾಗದೆ ಆಸ್ಪತ್ರೆಗಳಲ್ಲಿ ಅಂಗಾತ ಮಲಗಿರುವುದನ್ನು ಕಾಣಬಹುದು.ಇಂತಹಾ ಹಲವು ಘಟನೆಗಳು ನಮ್ಮ ಬದುಕಿನ ಬದಲಾವಣೆಗೆ ಕಾರಣವಾದರೆ ನಾವೆಷ್ಟು ಧನ್ಯರು.!

✍️ಮಾಚಾರ್ ಸಅದಿ
06/12/25 ಶನಿವಾರ