ಹೊಸದಿಲ್ಲಿ: ಕಳೆದ ಐದು ದಿನಗಳಿಂದ ಇಂಡಿಗೋ ವಿಮಾನಯಾನ ಸಂಸ್ಥೆಯ ನೂರಾರು ವಿಮಾನಗಳು ರದ್ದಾಗಿ ಗೊಂದಲ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಕಠಿಣ ಕ್ರಮಕ್ಕೆ ಮುಂದಾಗಿದೆ.
ಇಂಡಿಗೋ ಬಿಕ್ಕಟ್ಟಿನ ಲಾಭ ಪಡೆದು ಕೆಲವು ಮಾರ್ಗಗಳಲ್ಲಿ ವಿಮಾನ ಟಿಕೆಟ್ ದರಗಳು ಅಸಹಜವಾಗಿ ಏರಿಕೆಯಾಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರಯಾಣಿಕರ ಶೋಷಣೆಯನ್ನು ತಡೆಯಲು ಮತ್ತು ‘ಸಂದರ್ಭದ ಲಾಭ’ ಪಡೆಯುವುದನ್ನು ತಪ್ಪಿಸಲು, ಸರ್ಕಾರವು ವಿಮಾನ ದರಗಳ ಮೇಲೆ ಮಿತಿಯನ್ನು ಹೇರಿದೆ. ಪರಿಸ್ಥಿತಿ ಸುಧಾರಿಸುವವರೆಗೂ ಈ ದರ ನಿಯಂತ್ರಣ ಜಾರಿಯಲ್ಲಿರುತ್ತದೆ. ಇದರಿಂದ ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗೆ ತೆರಳುವ ರೋಗಿಗಳಿಗೆ ಅನುಕೂಲವಾಗಲಿದೆ.
500 ಕಿ.ಮೀ ವರೆಗಿನ ದೂರಕ್ಕೆ ಗರಿಷ್ಠ 7,500 ರೂ. ಶುಲ್ಕ ವಿಧಿಸಬಹುದು ಎಂದು ಕೇಂದ್ರ ಆದೇಶಿಸಿದೆ. 500 ರಿಂದ 1,000 ಕಿ.ಮೀ ವರೆಗಿನ ದೂರಕ್ಕೆ ರೂ. 12,000 ಮತ್ತು 1,500 ಕಿ.ಮೀ ವರೆಗಿನ ದೂರಕ್ಕೆ ರೂ. 15,000 ಶುಲ್ಕ ವಿಧಿಸಬಹುದು. 1,500 ಕಿ.ಮೀ ಗಿಂತ ಹೆಚ್ಚಿನ ದೂರಕ್ಕೆ ಗರಿಷ್ಠ 18,000 ರೂ. ಶುಲ್ಕ ವಿಧಿಸಬಹುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.(ಬಳಕೆದಾರರ ಅಭಿವೃದ್ಧಿ ಶುಲ್ಕ, ಪ್ರಯಾಣಿಕರ ಸೇವಾ ಶುಲ್ಕ ಮತ್ತು ತೆರಿಗೆಗಳು ಹೊರತುಪಡಿಸಿ). ಈ ದರವು ಬಿಸಿನೆಸ್ ಕ್ಲಾಸ್ ಮತ್ತು ಉಡಾನ್ ವಿಮಾನಗಳಿಗೆ ಅನ್ವಯಿಸುವುದಿಲ್ಲ.
ಈ ಮಧ್ಯೆ, ಇಂಡಿಗೋ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋ ಅಧಿಕಾರಿಗಳನ್ನು ಕರೆಸಿದೆ. ಸಂಜೆ 6 ಗಂಟೆಗೆ ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಸಭೆ ನಡೆಯಲಿದೆ. ಭಾರಿ ದಂಡ ವಿಧಿಸುವ ಸೂಚನೆಗಳಿವೆ.
ರದ್ದಾದ ಅಥವಾ ವ್ಯತ್ಯಯಗೊಂಡ ವಿಮಾನಗಳ ಪ್ರಯಾಣಿಕರಿಗೆ ಭಾನುವಾರ (ಡಿಸೆಂಬರ್ 7) ರಾತ್ರಿ 8 ಗಂಟೆಯೊಳಗೆ ಸಂಪೂರ್ಣ ಹಣವನ್ನು ಮರುಪಾವತಿ (ರೀಫಂಡ್) ಮಾಡುವಂತೆ ಸಚಿವಾಲಯವು ಇಂಡಿಗೋ ಸಂಸ್ಥೆಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ವಿಮಾನ ರದ್ದತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರಿಗೆ ತಕ್ಷಣವೇ ರೀಫಂಡ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸಚಿವಾಲಯ ಸೂಚಿಸಿದೆ. ಇದರೊಂದಿಗೆ, ರದ್ದಾದ ವಿಮಾನಗಳಿಂದಾಗಿ ತಮ್ಮ ಪ್ರಯಾಣದ ದಿನಾಂಕವನ್ನು ಬದಲಾಯಿಸಿಕೊಳ್ಳುವ ಪ್ರಯಾಣಿಕರಿಂದ ಯಾವುದೇ ರೀತಿಯ ‘ಮರುನಿಗದಿ ಶುಲ್ಕ’ವನ್ನು ವಿಧಿಸಬಾರದು ಎಂದು ವಿಮಾನಯಾನ ಸಂಸ್ಥೆಗಳಿಗೆ ತಾಕೀತು ಮಾಡಲಾಗಿದೆ. ಒಂದು ವೇಳೆ ರೀಫಂಡ್ ನೀಡುವಲ್ಲಿ ವಿಳಂಬವಾದರೆ ಅಥವಾ ನಿಯಮ ಪಾಲಿಸದಿದ್ದರೆ ತಕ್ಷಣವೇ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ.
ವಿಮಾನಗಳ ರದ್ದತಿಯಿಂದಾಗಿ ಪ್ರಯಾಣಿಕರಿಂದ ಬೇರ್ಪಟ್ಟಿರುವ ಲಗೇಜ್‌ಗಳನ್ನು ಗುರುತಿಸಿ, 48 ಗಂಟೆಯೊಳಗೆ ಪ್ರಯಾಣಿಕರ ಮನೆಗೆ ಅಥವಾ ಅವರು ಸೂಚಿಸಿದ ವಿಳಾಸಕ್ಕೆ ತಲುಪಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಪ್ರಯಾಣಿಕರ ನೆರವಿಗಾಗಿ ಮೀಸಲಾದ ‘ಸಹಾಯ ಕೇಂದ್ರ’ಗಳನ್ನು ಸ್ಥಾಪಿಸಬೇಕು ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸಂಸ್ಥೆಯೇ ಪ್ರಯಾಣಿಕರನ್ನು ಸಂಪರ್ಕಿಸಬೇಕು ಎಂದು ಸೂಚಿಸಲಾಗಿದೆ.
ಪೈಲಟ್‌ಗಳ ಕೊರತೆ ಮತ್ತು ಯೋಜನೆಯಲ್ಲಿನ ಲೋಪಗಳಿಂದಾಗಿ ಈ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಕ್ಷಮೆ ಕೋರಿರುವ ಇಂಡಿಗೋ, ಡಿಸೆಂಬರ್ 10 ರಿಂದ 15ರ ವೇಳೆಗೆ ವಿಮಾನ ಹಾರಾಟ ಸಂಪೂರ್ಣ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರು ಪ್ರತಿಕ್ರಿಯಿಸಿ, ದಿಲ್ಲಿ, ಮುಂಬೈ ಮತ್ತು ಚೆನ್ನೈನಂತಹ ಮೆಟ್ರೋ ವಿಮಾನ ನಿಲ್ದಾಣಗಳಲ್ಲಿ ದಟ್ಟಣೆ ಕಡಿಮೆಯಾಗುತ್ತಿದ್ದು, ಪರಿಸ್ಥಿತಿ ಸುಧಾರಿಸುವ ಹಂತದಲ್ಲಿದೆ ಎಂದು ಭರವಸೆ ನೀಡಿದ್ದಾರೆ.






