janadhvani

Kannada Online News Paper

ಸ್ಕಾರ್ಫ್ ವಿವಾದ ಸೌಹಾರ್ದಯುತ ಪರಿಹಾರಕ್ಕೆ ಎಸ್ಸೆಸ್ಸೆಫ್ ಆಗ್ರಹ

ಬೆಂಗಳೂರು:(ಜನಧ್ವನಿ ವಾರ್ತೆ) ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಸ್ಕಾರ್ಫ್ ವಿಷಯದಲ್ಲಿ ವಿವಾದ ಉಂಟಾಗಿರುವುದು ಖೇದಕರ. ಇಂತಹ ಸೂಕ್ಷ್ಮ ವಿಚಾರಗಳು ವಿವಾದಕ್ಕೊಳಗಾಗದಂತೆ ಕಾಲೇಜು ಆಡಳಿತ ಮಂಡಳಿ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು ಆಗ್ರಹಿಸಿದ್ದಾರೆ. ವಿದ್ಯಾರ್ಥಿನಿಯರು ಹಾಗೂ ಹೆತ್ತವರ ಸಭೆ ಕರೆದು ಈ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಕಾಲೇಜು ಆಡಳಿತ ಮಂಡಳಿ ಮುಂದಾಗಬೇಕು. ವಿದ್ಯಾರ್ಥಿನಿಯರ ನ್ಯಾಯಯುತ ಬೇಡಿಕೆಗೆ ವಿರುದ್ಧವಾಗಿ ಆಡಳಿತ ಮಂಡಳಿಯು ಹೇಳಿಕೆ ಕೊಡುವುದರಿಂದ ವಿವಾದ ಇತ್ಯರ್ಥವಾಗುವುದಿಲ್ಲ. ಇಂತಹ ಸಂದರ್ಭಗಳ ದುರ್ಲಾಭ ಪಡೆಯಲು ರಾಜಕೀಯಪ್ರೇರಿತ ಶಕ್ತಿಗಳ ಅವಕಾಶ ಒದಗಿಸಿದಂತಾಗುತ್ತದೆ. ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ವಿವಾದಗಳನ್ನು ಜಟಿಲಗೊಳಿಸಲು ಪ್ರಯತ್ನಿಸುವವರ ಬಗ್ಗೆ ನಾಗರಿಕರ ಜಾಗರೂಕರಾಗಿರಬೇಕು. ಅವರವರ ಧರ್ಮದ ವೇಶಭೂಷಣಕ್ಕೆ ದೇಶದ ಸಂವಿಧಾನ ಅವಕಾಶ ನೀಡಿದೆ. ಸಿಖ್ ಸಮುದಾಯದವರಿಗೆ ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಅವರ ವೇಶಭೂಷಣಕ್ಕೆ ಅವಕಾಶ ನೀಡಲಾಗುತ್ತಿದೆ. ಕ್ರೈಸ್ತ ಭಗಿನಿಯರು ತಮ್ಮದೇ ವಸ್ತ್ರಧಾರಣೆ ಹೊಂದಿರುತ್ತಾರೆ. ಅದರಂತೆ ಮುಸ್ಲಿಮ್ ಹೆಂಗಸರ ಪಾಲಿಗೆ ಸ್ಕಾರ್ಫ್ ಎನ್ನುವುದು ಧಾರ್ಮಿಕ ನಂಬಿಕೆಯ ಭಾಗವಾಗಿದೆ. ಆದುದರಿಂದ ಸ್ಕಾರ್ಫ್ ಗೆ ತರಗತಿಯೊಳಗೂ ಅವಕಾಶ ನಿರಾಕರಿಸುವುದು ಸಂವಿಧಾನ ವಿರೋಧಿ ನಡೆಯಾಗಿದೆ.
ಸಂಸ್ಥೆಯು ನಿಗದಿಪಡಿಸಿದ ಸಮವಸ್ತ್ರದ ಬಣ್ಣದ ಸ್ಕಾರ್ಫ್ ಧರಿಸಲು ವಿದ್ಯಾರ್ಥಿನಿಯರಿಗೆ ಸೂಚಿಸುವ ಮೂಲಕ ಈ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಬೇಕು ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

error: Content is protected !! Not allowed copy content from janadhvani.com