janadhvani

Kannada Online News Paper

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಮಧ್ಯಸ್ಥಿಕೆ ಫಲಶ್ರುತಿ- ನಿಮಿಷಪ್ರಿಯ ಮರಣದಂಡನೆ ಮುಂದೂಡಿಕೆ

ಈ ಸಂಬಂಧ ಯೆಮೆನ್ ಅಧಿಕಾರಿಗಳ ಅಧಿಕೃತ ಪ್ರಕಟಣೆಯನ್ನು ಕಾಂತಪುರಂ ಉಸ್ತಾದರ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೋಝಿಕ್ಕೋಡ್ |ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಪಾಲಕ್ಕಾಡ್ ಮೂಲದ ನಿಮಿಷಪ್ರಿಯ ಬಿಡುಗಡೆಗಾಗಿ ಭಾರತೀಯ ಗ್ರಾಂಡ್ ಮುಪ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೇತೃತ್ವದ ಮಧ್ಯಸ್ಥಿಕೆ ಫಲ ನೀಡುತ್ತಿದೆ. ನಾಳೆ ನಡೆಯಬೇಕಿದ್ದ ನಿಮಿಷಪ್ರಿಯ ಅವರ ಮರಣದಂಡನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಈ ಸಂಬಂಧ ಯೆಮೆನ್ ಅಧಿಕಾರಿಗಳ ಅಧಿಕೃತ ಪ್ರಕಟಣೆಯನ್ನು ಕಾಂತಪುರಂ ಉಸ್ತಾದರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ನಿಮಿಷಪ್ರಿಯ ಅವರ ಮರಣದಂಡನೆಯನ್ನು ಮುಂದೂಡುವ ತೀರ್ಪಿನ ಪ್ರತಿಯನ್ನು ಅಧಿಕೃತವಾಗಿ ಸ್ವೀಕರಿಸಲಾಗಿದೆ ಮತ್ತು ಇದಕ್ಕಾಗಿ ಕೆಲಸ ಮಾಡಿದ ಮತ್ತು ಪ್ರಾರ್ಥಿಸಿದ ಎಲ್ಲರಿಗೂ ಅಲ್ಲಾಹನ ಕರುಣೆ ಸಿಗಲಿ ಎಂದು ಕಾಂತಪುರಂ ಉಸ್ತಾದರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದಿದ್ದಾರೆ.

ಪಬ್ಲಿಕ್ ಪ್ರಾಸಿಕ್ಯೂಟರ್ ಸೂಚನೆಯ ಮೇರೆಗೆ, ನಾಳೆ ನಡೆಯಬೇಕಿದ್ದ ಭಾರತೀಯ ನಾಗರಿಕ ನಿಮಿಷಾ ಪ್ರಿಯಾ ಟಾಮಿ ಥಾಮಸ್ ಅವರ ಮರಣದಂಡನೆಯನ್ನು ಮುಂದೂಡಲಾಗಿದೆ ಎಂದು ಯೆಮೆನ್ ಪಬ್ಲಿಕ್ ಪ್ರಾಸಿಕ್ಯೂಟ‌ರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಂದಿನ ಆದೇಶ ಬರುವವರೆಗೆ ಮರಣದಂಡನೆ ಶಿಕ್ಷೆಯನ್ನು ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳೆದ ದಿನ ಶಾಸಕ ಚಾಂಡಿ ಉಮ್ಮನ್ ಅವರ ಕೋರಿಕೆಯ ಮೇರೆಗೆ ಕಾಂತಪುರಂ ಉಸ್ತಾದರು ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ್ದರು. ಕಾಂತಪುರಂ ಉಸ್ತಾದ್ ಅವರ ಕೋರಿಕೆಯ ಮೇರೆಗೆ, ಪ್ರಮುಖ ಯೆಮೆನ್ ವಿದ್ವಾಂಸ ಶೈಖ್ ಹಬೀಬ್ ಉಮರ್ ಬಿನ್ ಹಫೀಝ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದರು. ಎರಡು ದಿನಗಳ ಅನೌಪಚಾರಿಕ ಮಾತುಕತೆಯ ಅಂತಿಮ ಹಂತವಾಗಿ ನಿನ್ನೆ ಎರಡು ಬಾರಿ ಚರ್ಚೆಗಳು ನಡೆದವು. ಶೈಖ್ ಹಬೀಬ್ ಉಮ‌ರ್ ಅವರ ಸೋದರಳಿಯ ಹಬೀಬ್ ಅಬ್ದುರಹ್ಮಾನ್ ಅಲಿ ಮಶ್ಹೂರ್ ಚರ್ಚೆಗಳನ್ನು ಮುನ್ನಡೆಸುತ್ತಿದ್ದಾರೆ.


ಯೆಮೆನ್ ಅಧಿಕಾರಿಗಳ ಪ್ರಕಟಣೆ

https://www.facebook.com/share/1B8ukqbmD1/