ಮಂಗಳೂರು,ಏ.11: ಕೇಂದ್ರ ಸರಕಾರ ಜಾರಿಗೆ ತಂದಿರುವ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಏ.18 ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ.
ಕರ್ನಾಟಕ ಉಲಮಾ ಕೋಆರ್ಡಿನೇಷನ್ ವತಿಯಿಂದ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಮತ್ತು ಖಾಝಿ ಶೈಖುನಾ ಮಾಣಿ ಉಸ್ತಾದ್ ಇವರ ನೇತೃತ್ವದಲ್ಲಿ ಏ.18 ರಂದು ಶುಕ್ರವಾರ ಅಪರಾಹ್ನ 3 ಗಂಟೆಗೆ ಮಂಗಳೂರಿನ ಹೊರವಲಯದ ಅಡ್ಯಾರ್ ಕಣ್ಣೂರು ಶಾ ಗಾರ್ಡನ್ ನಲ್ಲಿ ಐತಿಹಾಸಿಕ ಹೋರಾಟ ನಡೆಯಲಿದೆ.
ಈ ಬಗ್ಗೆ ಜಾಗೃತಿ ಮೂಡಿಸುವಂತೆ ಎಲ್ಲಾ ಮೊಹಲ್ಲಾಗಳಿಗೆ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಶೀಘ್ರದಲ್ಲೇ ಕರ್ನಾಟಕ ಉಲಮಾ ಕೋಆರ್ಡಿನೇಷನ್ ಸಮಿತಿಯು ಪತ್ರಿಕಾಗೋಷ್ಠಿ ನಡೆಸಿ ಬೃಹತ್ ಪ್ರತಿಭಟನೆಯ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ.
2020ರ ಆರಂಭದಲ್ಲಿ ಕೇಂದ್ರ ಸರ್ಕಾರದ ಸಿಎಎ ಕಾಯ್ದೆ ಮತ್ತು ಎನ್ ಆರ್ ಸಿ ವಿರೋಧಿಸಿ ಮಂಗಳೂರು ಹೊರವಲಯದ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಬೃಹತ್ ಹೋರಾಟ ನಡೆದಿತ್ತು. ಅಂದಿನ ಪ್ರತಿಭಟನೆಯಲ್ಲಿ 1 ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಈಗ ಅದೇ ಶಾ ಗಾರ್ಡನ್ ಮೈದಾನವು ಎನ್ ಆರ್ ಸಿ ಹೋರಾಟವನ್ನೂ ಮೀರಿಸುವ ದೊಡ್ಡ ಮಟ್ಟದ ಮತ್ತೊಂದು ಹೋರಾಟಕ್ಕೆ ಸಾಕ್ಷಿಯಾಗಲಿದೆ.
ಏಪ್ರಿಲ್ 18ರ ಪ್ರತಿಭಟನೆಯಲ್ಲಿ ಹಲವಾರು ಪ್ರಮುಖರು ಭಾಗವಹಿಸಲಿದ್ದಾರೆ. ಏಪ್ರಿಲ್ 12 ಶನಿವಾರದಂದು ಪತ್ರಿಕಾಗೋಷ್ಠಿ ನಡೆಸಲು ಕರ್ನಾಟಕ ಉಲಮಾ ಕೋಆರ್ಡಿನೇಷನ್ ತೀರ್ಮಾನಿಸಿದೆ.