ಮಂಗಳೂರು: ಸುನ್ನೀ ಉಲಮಾ ಕೋ ಆರ್ಡಿನೇಷನ್ ಸಮಿತಿ ಇದರ ಕೋಶಾಧಿಕಾರಿ, ಮಾಜಿ ವಖ್ಫ್ ಅಧ್ಯಕ್ಷರಾದ ಮೌಲಾನಾ ಶಾಫಿ ಸಅದಿ ವಿರುದ್ಧ ಸುಳ್ಳು ಆರೋಪ ವರದಿ ಪ್ರಕಟಿಸಿದ್ದ ಮಂಗಳೂರಿನ ಜಯಕಿರಣ ಪತ್ರಿಕೆ ಮಾನನಷ್ಟ ಪರಿಹಾರ ನೀಡುವಂತೆ ನೋಟೀಸ್ ಜಾರಿ ಮಾಡಲಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಖ್ಫ್ ತಿದ್ದುಪಡಿ ಮಸೂದೆ ವಿರುದ್ಧ ಇತ್ತೀಚೆಗೆ ಮಂಗಳೂರಿನಲ್ಲಿ ಸುನ್ನೀ ಉಲಮಾ ಕೋ ಆರ್ಡಿನೇಷನ್ ಸಮಿತಿಯು ಬೃಹತ್ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಇದರ ಮುನ್ನಾದಿನ ಪ್ರಕಟವಾದ ಜಯಕಿರಣದಲ್ಲಿ ಪ್ರತಿಭಟನೆಯ ದಿಕ್ಕು ತಪ್ಪಿಸುವ ದುರುದ್ದೇಶದಿಂದ ಮಾಜಿ ವಖ್ಫ್ ಅಧ್ಯಕ್ಷರಾದ ಶಾಫಿ ಸಅದಿವರನ್ನು ಅಪಕೀರ್ತಿಗೊಳಿಸುವ ವರದಿಯನ್ನು ಪ್ರಕಟಿಸಿದೆ.
ಶಾಫಿ ಸಅದಿಯವರು ಕರ್ನಾಟಕ ವಖ್ಫ್ ಬೋರ್ಡ್ ಅಧ್ಯಕ್ಷರಾಗಿದ್ದ ಕಾಲಾವಧಿಯಲ್ಲಿ ಹತ್ತು ಎಕರೆ ವಖ್ಫ್ ಭೂಮಿಯನ್ನು ಕಬಳಿಸಿದ್ದಾರೆಂಬ ಗಂಭೀರ ಆರೋಪವನ್ನು ಜಯಕಿರಣದಲ್ಲಿ ಹೊರಿಸಲಾಗಿತ್ತು. ಇದರ ವಿರುದ್ಧ ಪ್ರತಿಭಟನೆ ಕಾರ್ಯಕ್ರಮದಲ್ಲೇ ಪ್ರತಿಕ್ರಿಯಿಸಿದ ಶಾಫಿ ಸಅದಿಯವರು ಸುಳ್ಳಾರೋಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಇದೀಗ ಜಯಕಿರಣ ಮತ್ತು ಅದರ ವ್ಯವಸ್ಥಾಪಕರ ವಿರುದ್ಧ ಮಾನನಷ್ಟ ಪರಿಹಾರಕ್ಕೆ ನೋಟೀಸ್ ಜಾರಿ ಮಾಡಿದ್ದಾರೆ.
ವರ್ತೂರು ಜಾಮಿಯ್ಯಾ ಮಸ್ಜಿದ್ ಅಧೀನದ ಹತ್ತು ಎಕರೆ ಸ್ಥಳ ಕರ್ನಾಟಕ ವಕ್ಫ್ ಮಂಡಳಿ ನಿಕಟಪೂರ್ವ ಅಧ್ಯಕ್ಷರಾದ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು ಮಾರಾಟ ಮಾಡಿದ್ದಾರೆಂದು ಮತ್ತು ಅವಹೇಳನಕಾರಿ ಸುಳ್ಳು ಮಾಹಿತಿಗಳನ್ನು ಸೇರಿಸಿ ಇತ್ತೀಚೆಗೆ ಕರಾವಳಿ ಸಂಜೆ ಪತ್ರಿಕೆ ಜಯಕಿರಣ ವರದಿ ಪ್ರಕಟಿಸಿತ್ತು. ದುರುದ್ದೇಶ ಪೂರಿತವಾದ ಈ ಪತ್ರಿಕಾ ಪ್ರಕಟಣೆ ವ್ಯಾಪಕವಾಗಿ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು.
ಮೌಲಾನಾ ಶಾಫಿ ಸಅದಿ ಬೆಂಗಳೂರು ಅವರಿಗೆ ಸಮಾಜದಲ್ಲಿರುವ ಗೌರವ , ಮತ್ತು ಅವರ ಸಾಮಾಜಿಕ ಜೀವನಕ್ಕೆ ಚ್ಯುತಿ ತರಲು ಉದ್ದೇಶಪೂರ್ವಕವಾಗಿ ಮಸಿ ಬಳಿಯುವ ಕೆಲಸವಾಗಿದೆ ಇದು ಎಂದು ಜನರು ಪ್ರತಿಕ್ರಿಯಿಸಿದ್ದರು. ಈ ನಡುವೆ ಉಸ್ತಾದರು ತಮ್ಮ ವಕೀಲರಾದ ಬೆಂಗಳೂರು ಆರ್ ಟಿ ನಗರ ಅಡ್ವೊಕೇಟ್ ಶಾಕೀರ್ ಅಬ್ಬಾಸ್ ಮೂಲಕ ಕಾನೂನು ನೋಟೀಸ್ ಜಯಕಿರಣ ಪತ್ರಿಕೆ ವ್ಯವಸ್ಥಾಪಕರು ಮತ್ತು ಕಛೇರಿಗೆ ನೀಡಿದ್ದಾರೆ. ಸುಮಾರು 8ಪುಟಗಳ ಲೀಗಲ್ ನೋಟೀಸ್ ನಲ್ಲಿ ಆರೋಪಗಳ ಕುರಿತು 7ದಿನಗಳಲ್ಲಿ ಸ್ಪಷ್ಟೀಕರಣ ನೀಡುವಂತೆ ಕೋರಲಾಗಿದೆ. ಬಳಿಕದ ಕಾನೂನು ಹೋರಾಟಕ್ಕೆ ಸಿಧ್ಧರಾಗುವಂತೆ ಹಾಗೂ ಮಾನನಷ್ಟ ಪರಿಹಾರವಾಗಿ ಒಂದು ಕೋಟಿ ರೂಪಾಯಿ ಪರಿಹಾರ ಧನವನ್ನೂ ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಉಸ್ತಾದ್, ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿದವರ ವ್ಯಕ್ತಿ ಹತ್ಯೆ ಮೂಲಕ ಅವರನ್ನು ಮಾನಸಿಕವಾಗಿ ತೊಂದರೆ ನೀಡುವ ಇಂತಹ ಕುಕೃತ್ಯ ಮಾಧ್ಯಮಗಳು ಸಮಾಜಕ್ಕೆ ಮಾರಕವಾಗಿದೆ. ಆದ್ದರಿಂದ ಕಾನೂನು ನೋಟೀಸ್ ನೀಡಲಾಗಿದೆಯೆಂದು ಪ್ರತಿಕ್ರಿಯಿಸಿದ್ದಾರೆ.