ಜಿದ್ದಾ : ಸೌದಿ ಅರೇಬಿಯಾದ ಜಿದ್ದಾದಲ್ಲಿ ಭಾರೀ ಮಳೆಯಾಗಿದೆ. ಈ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿದ್ದಾ ನಗರದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಸೋಮವಾರ ಬೆಳಗ್ಗೆ ಜಿದ್ದಾ ನಗರದ ಎಲ್ಲಾ ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ.
ಇಂದು ಬೆಳಗ್ಗೆಯಿಂದ ಸುರಿದ ಮಳೆಗೆ ನಗರದ ಹಲವು ರಸ್ತೆಗಳು ಜಲಾವೃತಗೊಂಡಿವೆ. ಹಲವಾರು ವಾಹನಗಳು ಕೊಚ್ಚಿ ಹೋಗಿದೆ. ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಬುಧವಾರದವರೆಗೂ ಮಳೆ ಮುಂದುವರಿಯುವ ನಿರೀಕ್ಷೆ ಇದೆ.
ಮಳೆಯು ಉತ್ತರ ಪ್ರಾಂತ್ಯದಿಂದ ಅಲ್ ಕಸೀಮ್, ರಿಯಾದ್, ಪೂರ್ವ ಪ್ರಾಂತ್ಯ, ಅಲ್ಬಹಾ, ಅಸಿರ್, ಮದೀನಾ ಮತ್ತು ಮಕ್ಕಾವನ್ನು ತಲುಪಲಿದೆ. ಏತನ್ಮಧ್ಯೆ, ಭಾರೀ ಮಳೆಯ ಕಾರಣ, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ವಿಮಾನಯಾನ ಸಂಸ್ಥೆಗಳೊಂದಿಗೆ ವಿಚಾರಿಸುವಂತೆ ಜಿದ್ದಾ ಕಿಂಗ್ ಅಬ್ದುಲ್ ಅಝೀಝ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ. ಭಾರೀ ಮಳೆಯಿಂದಾಗಿ ಕೆಲವು ವಿಮಾನಗಳು ವಿಳಂಬವಾಗಬಹುದು.
ಹವಾಮಾನ ಕೇಂದ್ರವು ಸೋಮವಾರ ಬೆಳಗ್ಗೆ 5 ರಿಂದ ಮಧ್ಯಾಹ್ನ 3 ರವರೆಗೆ ಜಿದ್ದಾ ನಗರದಲ್ಲಿ ರೆಡ್ ಅಲರ್ಟ್ ಘೋಷಿಸಿತ್ತು. ಮಳೆಯ ಬಗ್ಗೆ ಅಧಿಕೃತ ಮೂಲಗಳ ಸೂಚನೆಗಳನ್ನು ಅನುಸರಿಸಿ ಮತ್ತು ಜಾಗರೂಕರಾಗಿರಿ ಎಂದು ಅಧಿಕಾರಿಗಳು ಜನರಿಗೆ ತಿಳಿಸಿದ್ದಾರೆ.