ಇದೇ ಕಳೆದ ಡಿಸೆಂಬರ್ 26 ರಂದು ಪುತ್ತೂರಿನ ಸುಧಾನ ಮೈದಾನದಲ್ಲಿ ನಡೆದ ನೂರೇ ಅಜ್ಮೀರ್ ಹಾಗೂ ಮಾದಕತೆ ಮಾರಣಾಂತಿಕ ಎಂಬ ಪುಸ್ತಕ ಬಿಡುಗಡೆಯ ಬೃಹತ್ ಸಮಾರಂಭದಲ್ಲಿ ಪುತ್ತೂರು ಎಸ್. ಐ. ಶ್ರೀ ಆಂಜನೇಯ ರೆಡ್ಡಿಯವರಿಗೆ ‘ಸಮಾಜ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಆಂಜನೇಯ ರೆಡ್ಡಿಯವರು ದಕ್ಷ, ದಿಟ್ಟ ಅಧಿಕಾರಿಯಾಗಿದ್ದು ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ವಿಶೇಷ ಕಾಳಜಿಯನ್ನು ಹೊಂದಿರುತ್ತಾರೆ. ತಾಲೂಕಿನ ಹಲವಾರು ಶಾಲಾ ಕಾಲೇಜುಗಳಿಗೆ ತೆರಳಿ ಮಾದಕತೆಯ ಅಪಾಯದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ.
ಶ್ರೀ ಆಂಜನೇಯ ರೆಡ್ಡಿಯವರ ಕರ್ತವ್ಯನಿಷ್ಠೆ, ದಕ್ಷತೆ ಹಾಗೂ ಮಾದಕತೆಯ ವಿರುದ್ಧ ವಿಶೇಷ ಸೇವೆಯನ್ನು ಪರಿಗಣಿಸಿ ಈ ಗೌರವವನ್ನು ನೀಡಲಾಗಿತ್ತು. ಸಮಾರಂಭದಲ್ಲಿ ದಶಸಹಸ್ರ ಸಂಖ್ಯೆಯಲ್ಲಿ ಜನರು ಹಾಜರಾಗಿದ್ದು ರಾಜ್ಯ ಮತ್ತು ಜಿಲ್ಲಾ ಮಟ್ಟದ ವಿವಿಧ ಗಣ್ಯರು ಭಾಗವಹಿಸಿದ್ದರು.