janadhvani

Kannada Online News Paper

ಮರ್ಕಝ್ ನಾಲೆಡ್ಜ್ ಸಿಟಿ ‘ಮಿಹ್ರಾಸ್ ಹಾಸ್ಪಿಟಲ್’- ನಾಳೆ ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ

ಗುಡ್ಡಗಾಡು ಪ್ರದೇಶದ ನಿವಾಸಿಗಳಿಗೆ ಕಡಿಮೆ ವೆಚ್ಚದಲ್ಲಿ ಆಧುನಿಕ ಆರೋಗ್ಯ ಸೇವೆ ಒದಗಿಸುವುದು ಮಿಹ್ರಾಸ್ ಗುರಿ

ಕೋಝಿಕೋಡ್: ಮರ್ಕಝ್ ನಾಲೆಜ್ ಸಿಟಿಯ ‘ಮಿಹ್ರಾಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ’ಯ ಅಧಿಕೃತ ಉದ್ಘಾಟನೆಯನ್ನು ಸೆಪ್ಟೆಂಬರ್ 25 ಬುಧವಾರ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ ಎಂದು ಮರ್ಕಝ್ ನಾಲೆಜ್ ಸಿಟಿಯ ಸಿ ಇ ಒ ಡಾ. ಅಬ್ದುಲ್ ಸಲಾಂ ಮುಹಮ್ಮದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗುಡ್ಡಗಾಡು ಪ್ರದೇಶದ ನಿವಾಸಿಗಳಿಗೆ ಕಡಿಮೆ ವೆಚ್ಚದಲ್ಲಿ ಆಧುನಿಕ ಆರೋಗ್ಯ ಸೇವೆಗಳನ್ನು ಒದಗಿಸುವುದು ಮಿಹ್ರಾಸ್ ಆಸ್ಪತ್ರೆಯ ಗುರಿಯಾಗಿದೆ ಎಂದು ಅವರು ಹೇಳಿದರು.

ಪೇಯಿನ್ ಮೆಡಿಸಿನ್ ಮತ್ತು ರಿಹ್ಯಾಬಿಲಿಟೇಷನ್, ಫಿಸಿಯೋಥೆರಪಿ ಅಂಡ್ ಸ್ಟ್ರೋಕ್ ರಿಹ್ಯಾಬಿಲಿಟೇಷನ್, ಕ್ಯೂ ಆರ್ ಎಸ್ ಪೆಲ್ವಿ ಸೆಂಟರ್, ಸ್ಪೀಚ್ ಥೆರಪಿ ಅಂಡ್ ರಿಹ್ಯಾಬಿಲಿಟೇಷನ್ ಇತ್ಯಾದಿ ವಿಭಾಗಗಳು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ದಿನದ 24 ಗಂಟೆಗಳೂ ಕ್ಯಾಶ್ವಾಲಿಟಿ, ಫಾರ್ಮಸಿ, ಲ್ಯಾಬ್, ಎಕ್ಸ್-ರೇ ಮತ್ತು ಆಂಬ್ಯುಲೆನ್ಸ್ ಸೇವೆಗಳು ಇಲ್ಲಿ ಲಭ್ಯವಿವೆ ಎಂದು ಆಸ್ಪತ್ರೆಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜನರಲ್ ಮೆಡಿಸಿನ್, ಪೀಡಿಯಾಟ್ರಿಕ್ಸ್, ಜನರಲ್ ಸರ್ಜರಿ, ಗೈನಕಾಲಜಿ ಸೇರಿದಂತೆ ಹತ್ತರಷ್ಟು ವಿಶೇಷ ವಿಭಾಗಗಳ ಜೊತೆಗೆ ಡಯಾಲಿಸಿಸ್ ಸೆಂಟರ್, ಸ್ಪೀಚ್ ಥೆರಪಿ ಅಂಡ್ ಚೈಲ್ಡ್ ಡೆವಲಪ್‌ಮೆಂಟ್ ಸೆಂಟರ್, ಸಮೀಪದ ಗ್ರಾಮವಾಸಿಗಳಾದ ಕ್ಯಾನ್ಸರ್-ಕಿಡ್ನಿ ರೋಗಿಗಳಿಗಾಗಿ ಪ್ಯಾಲಿಯೇಟಿವ್ ಕೇರ್, ಬಡ ರೋಗಿಗಳಿಗಾಗಿ ವಿಶೇಷ ಮೆಡಿ ಕಾರ್ಡ್‌ ಇತ್ಯಾದಿಗಳು ಮಿಹ್ರಾಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇದಲ್ಲದೆ, ಮರ್ಕಝ್ ನಾಲೆಡ್ಜ್ ಸಿಟಿಯ ಸುತ್ತಮುತ್ತಲಿನ 40 ಗ್ರಾಮಗಳ ಮಹಿಳೆಯರು ಸೇರಿದಂತೆ ಯುವಕರಿಗೆ ಆರೋಗ್ಯ ತರಬೇತಿಯನ್ನು ಇದೀಗಾಗಲೇ ಪ್ರಾರಂಭಿಸಲಾಗಿದೆ. ಕೇರಳ ಸರ್ಕಾರದ ಕುಟುಂಬಶ್ರೀ ಯೋಜನೆಯ ಸಹಕಾರದೊಂದಿಗೆ 30 ಜನರ ಮೊದಲ ಬ್ಯಾಚ್‌ಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಬೇಸಿಕ್ ಲೈಫ್ ಸಪೋರ್ಟ್, ಪ್ಯಾಲಿಯೇಟಿವ್ ಕೇರ್, ನರ್ಸಿಂಗ್ ಕೇರ್ ಸೇರಿದಂತೆ 30 ರಷ್ಟು ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಇವರ ಮೂಲಕ ಸೆರ್ವಿಕ್ಕಲ್ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಇತ್ಯಾದಿ ರೋಗಗಳನ್ನು ಮುಂಚಿತವಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ಇದರ ಗುರಿಯಾಗಿದೆ. ಇದರ ಮೂಲಕ ಬಡ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಯ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಲು ಮಿಹ್ರಾಸ್ ಪ್ರಯತ್ನಿಸುತ್ತಿದೆ ಎಂದು ಅಧಿಕೃತರು ಹೇಳಿದರು.

ಸಂಪೂರ್ಣ ಸಂಯೋಜಿತ ಆಪರೇಷನ್ ಥಿಯೇಟರ್‌ಗಳು, ಡಯಾಲಿಸಿಸ್ ಯೂನಿಟ್, ಚೈಲ್ಡ್ ಲರ್ನಿಂಗ್ ಅಂಡ್ ಡೆವಲಪ್‌ಮೆಂಟ್ ಸೆಂಟರ್ (ಸಿಎಲ್‌ಡಿಸಿ) ಇತ್ಯಾದಿ ಆಧುನಿಕ ಸೌಲಭ್ಯಗಳು ಮಿಹ್ರಾಸ್ ಆಸ್ಪತ್ರೆಯಲ್ಲಿ ಲಭ್ಯವಿವೆ. ಗುಣಮಟ್ಟದ ಆರೋಗ್ಯ ಸೇವೆಯನ್ನು ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ಒದಗಿಸುವ ಗುರಿಯೊಂದಿಗೆ ಗುಡ್ಡಗಾಡು ಪ್ರದೇಶದಲ್ಲಿ ಮಿಹ್ರಾಸ್ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ.

ಮಧ್ಯಾಹ್ನ 1.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಲಿದ್ದು, ಸಾಮಾಜಿಕ-ರಾಜಕೀಯ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ಮರ್ಕಝ್ ನಾಲೆಜ್ ಸಿಟಿಯ ಸಿ ಇ ಒ ಡಾ. ಅಬ್ದುಲ್ ಸಲಾಂ ಮೊಹಮ್ಮದ್, ಮಿಹ್ರಾಸ್ ಆಸ್ಪತ್ರೆಯ ಚೇರ್ಮ್ಯಾನ್ ಡಾ. ಪಿ ವಿ ಮಜೀದ್, ನಿರ್ದೇಶಕರಾದ ಡಾ. ಸಾಜಿದ್, ಅಫ್ಸಲ್ ಕೋಳಿಕ್ಕಲ್ಲ್, ಮರ್ಕಝ್ ನಾಲೆಜ್ ಸಿಟಿ ಮೀಡಿಯಾ ಕೋಆರ್ಡಿನೇಟರ್ ಮನ್ಸೂರ್ ಎ ಖಾದಿರ್ ಇವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

error: Content is protected !! Not allowed copy content from janadhvani.com