janadhvani

Kannada Online News Paper

ಕೆಸಿಎಫ್ ಬಹರೈನ್: ಬೃಹತ್ ಮೀಲಾದ್ ಕಾನ್ಫರೆನ್ಸ್’ಗೆ ಪ್ರೌಢ ಸಮಾಪ್ತಿ

"ಮುಹಮ್ಮದ್ ನಬಿ ﷺ ಮಾನವೀಯತೆಯ ಮಾರ್ಗದರ್ಶಿ" ಎಂಬ ಘೋಷ ವಾಕ್ಯದೊಂದಿಗೆ ಮನಾಮ ಕನ್ನಡ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಮೀಲಾದ್ ಸಮಾವೇಶ

ಮನಾಮ: ಮುಹಮ್ಮದ್ ನಬಿ ﷺ ರವರು ಮಾನವೀಯತೆಯ ಮಾರ್ಗದರ್ಶಿ ಎಂಬ ಘೋಷ ವಾಕ್ಯದೊಂದಿಗೆ ಮನಾಮ ಕನ್ನಡ ಭವನದಲ್ಲಿ ನಡೆದ ಕೆಸಿಎಫ್ ಬಹರೈನ್ ಅಂತರಾಷ್ಟ್ರೀಯ ಮೀಲಾದ್ ಸಮಾವೇಶವು ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು.

ಸೈಯ್ಯಿದ್ ಅಲೀ ಬಾಫಕೀ ತಂಙಲ್ ಪ್ರಾರ್ಥನೆಗೈದರು. ಕೆಸಿಎಫ್ ಬಹರೈನ್ ಉಲಮಾ ನೇತಾರರು ಮೌಲಿದ್ ಹಾಗೂ ಬುರ್ದಾ ಮಜ್ಲಿಸಿಗೆ ನೇತೃತ್ವ ನೀಡಿದರು. ಹಾಫಿಝ್ ದರ್ವೇಸ್ ಅಲೀ ಖಿರಾಅತ್ ಪಠಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಸ್ವಾಗತಿಸಿ, ಕೆಸಿಎಫ್ ಐಸಿ ಮಾಜಿ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿದ ಬಹು. ಹಾಫಿಝ್ ಮಸ್ವೂದ್ ಸಖಾಫಿ ಗೂಡಲ್ಲೂರು ಉಸ್ತಾದರು ಅರಫಾ ದಿನ ಪ್ರವಾದಿ ﷺ ರವರು ಮಾಡಿದ ಅರ್ಥಗರ್ಭಿತವಾದ ಭಾಷಣವನ್ನು ವಿವರಿಸಿ ಕೌಟುಂಬಿಕ ಜೀವನದ ಮಹತ್ವವನ್ನು ಮನದಟ್ಟು ಮಾಡಿದರು. ಕುಟುಂಬ ಸಂಬಂಧ ಮುರಿಯಬಾರದು. ಮಾತಾಪಿತರನ್ನು ಗುರುವರ್ಯರನ್ನು ಗೌರವಿಸಬೇಕು. ಅಸೂಯೆ, ಅಹಂಭಾವ ಮನದಲ್ಲಿರಬಾರದು. ಶುದ್ಧ ಮನಸ್ಕರಾಗಬೇಕು. ಮತ್ತೊಬ್ಬರಿಗೆ ಸಹಾಯ ಮಾಡುವುದು ಅಲ್ಲಾಹನು ಅತ್ಯಂತ ಮೆಚ್ಚುವಂತಹಾ ಕಾರ್ಯವಾಗಿದೆ. ಪ್ರವಾದಿ ﷺ ರವರ ಚರ್ಯೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅವರು ಕರೆಯಿತ್ತರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯೆನೆಪೋಯ ಡೆವಲ್ಪ್ ಮೆಂಟ್ ಯುನಿವರ್ಸಿಟಿ ವಿಶ್ವವಿದ್ಯಾಲಯ ಮಂಗಳೂರು ಚಾನ್ಸೆಲರ್ ಡಾ. ವೈ. ಅಬ್ದುಲ್ಲಾ ಕುಂಞ ಹಾಜಿಯವರು ಮಾತನಾಡುತ್ತಾ ಕೆಸಿಎಫ್ ನಡೆಸಿಕೊಂಡು ಬರುತ್ತಿರುವ ಧಾರ್ಮಿಕ, ಶೈಕ್ಷಣಿಕ, ಸಾಂತ್ವನ ಮುಂತಾದ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಅಲ್ ಹಿಲಾಲ್, ಅಲ್ ಬದ್ರ್ ಶಮಾ ಗ್ರೂಪ್ ಮೇನೆಂಜಿಗ್ ಡೈರೆಕ್ಟರ್ ಅಬ್ದುಲ್ ಲತೀಫ್ ಉಪ್ಪಲ ರವರು ಮಾತನಾಡಿ ಅತ್ಯಂತ ಅಚ್ಚುಕಟ್ಟಾಗಿ ನಡೆದ ಕೆಸಿಎಫ್‌
ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

RSC ಅಧ್ಯಕ್ಷರಾದ ಶಿಹಾಬ್ ಉಸ್ತಾದ್ ಪರಪ್ಪ ಹಾಗೂ DKSC ಸೆಂಟ್ರಲ್ ಕಮಿಟಿ ವರ್ಕಿಂಗ್ ಅಧ್ಯಕ್ಷ ಮುಹಮ್ಮದ್ ಸೀದಿ ಹಾಜಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಹೆಲ್ತ್ ಕೇರ್ ಕೌನ್ಸಿಲ್ ಚೇರ್ಮಾನ್ ಡಾ. ಯು.ಟಿ. ಇಫ್ತಿಕಾರ್ ಫರೀದ್ ಉಳ್ಳಾಲ, ಉದ್ಯಮಿ ಮನ್ಸೂರ್ ಹೆಜಮಾಡಿ, ಬಹರೈನ್ ಫೈಲೆಂತ್ರೋಫಿಕ್ ಸೊಸೈಟಿ ಪ್ರಧಾನ ಕಾರ್ಯದರ್ಶಿ ಡಾ. ಹಸನ್ ಕಮಾಲ್,
ಕೆಸಿಎಫ್ ಐಸಿ ಫೈನಾನ್ಸಿಯಲ್ ಕಂಟ್ರೋಲರ್ ಅಲೀ ಮುಸ್ಲಿಯಾರ್ ಕೊಡಗು, ರಾಷ್ಟ್ರೀಯ ಸಮಿತಿ ಮಾಜಿ ಅಧ್ಯಕ್ಷರಾದ ಜನಾಬ್ ಎಸ್. ಎಂ. ಫಾರೂಖ್ ಕುಂಬ್ರ, ಕೆಸಿಎಫ್ ಐಸಿ ರಿಲೀಫ್ ವಿಂಗ್ ಅಧ್ಯಕ್ಷರಾದ ರೇಸ್ಕೋ ಅಬೂಬಕರ್ ಹಾಜಿ, ಕೆಸಿಎಫ್ ಸೌದಿ ಅರೇಬಿಯಾ ನಾಯಕರಾದ ‍ಎನ್.ಎಸ್. ಅಬ್ದುಲ್ಲಾ ಹಾಜಿ, ಫಾರೂಖ್ ಕಾಟಿಪಳ್ಳ. ಬಹರೈನ್ ಉರ್ದುವಿಂಗ್ ಅಧ್ಯಕ್ಷರಾದ ಗಯಾಝುದ್ದೀನ್ ಮೈಸೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ, ಝೋನಲ್, ಸೆಕ್ಟರುಗಳ, ನಾಯಕರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಾಗತ ಸಮಿತಿ ಚೇರ್ಮಾನ್ ಲತೀಫ್ ಪೆರೋಲಿ ಧನ್ಯವಾದವಿತ್ತರು.

✍️ ಎಂ.ಎ. ವೇಣೂರು
ಕೆ‌ಸಿಎಫ್ ಬಹರೈನ್

error: Content is protected !! Not allowed copy content from janadhvani.com