janadhvani

Kannada Online News Paper

ದುಲ್ ಹಜ್ಜ್ ಚಂದ್ರ ದರ್ಶನ: ಜೂ 17 ರಂದು ಬಕ್ರೀದ್ ಆಚರಣೆ- ಖಾಝಿಗಳಿಂದ ಘೋಷಣೆ

ಅರಫಾ ದಿನವನ್ನು ದುಲ್ ಹಜ್ 9 (ಜೂನ್ 16) ರಂದು ಆಚರಿಸಲಾಗುತ್ತಿದೆ, ಅಂದು ಉಪವಾಸ ಸುನ್ನತ್ತಾಗಿದೆ.

ಮಂಗಳೂರು: ಕೇರಳದಲ್ಲಿ ದುಲ್ ಹಜ್ ತಿಂಗಳ ಚಾಂದ್ ದರ್ಶನವಾದ ಹಿನ್ನೆಲೆಯಲ್ಲಿ ನಾಳೆ (ಜೂನ್ 8) ದುಲ್ ಹಜ್ಜ್ ಮೊದಲನೇ ದಿನವಾಗಿರಲಿದೆ ಹಾಗೂ ಜೂನ್ 17 ರಂದು (ದುಲ್ ಹಜ್ 10) ಈದುಲ್ ಅದ್ಹಾ ಆಚರಿಸಲಾಗುವುದು ಎಂದು ಖಾಝಿಗಳು ಘೋಷಣೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿಗಳಾದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್ ಬುಖಾರಿ ಮತ್ತು ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಹಾಗೂ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಮಾಣಿ ಉಸ್ತಾದ್ ಘೋಷಿಸಿದ್ದಾರೆ.

ಇಸ್ಲಾಮಿಕ್ ಕ್ಯಾಲೆಂಡರ್ ನ ಕೊನೆಯ ತಿಂಗಳಾದ ದುಲ್ ಹಜ್ ಶನಿವಾರದಿಂದ ಆರಂಭಗೊಳ್ಳಲಿದೆ. ಇಸ್ಲಾಮಿಕ್ ಧಾರ್ಮಿಕ ಆಚರಣೆಗಳಲ್ಲಿ ಒಂದಾದ ಪವಿತ್ರ ಹಜ್ ಕರ್ಮದ ಪ್ರಮುಖ ಭಾಗವಾಗಿರುವ ಅರಫಾ ದಿನವನ್ನು ದುಲ್ ಹಜ್ 9 (ಜೂನ್ 16) ರಂದು ಆಚರಿಸಲಾಗುತ್ತಿದೆ, ಅಂದು ಉಪವಾಸ ಸುನ್ನತ್ತಾಗಿದೆ.

ಅದೇ ರೀತಿ, ದುಲ್ ಹಜ್ ತಿಂಗಳ ಆರಂಭದಿಂದ 13 ರ ರಾತ್ರಿ ವರೆಗೆ ಬಲಿ ನೀಡಲ್ಪಡುವ ಜಾನುವಾರುಗಳನ್ನು ಕಂಡಲ್ಲಿ ಮತ್ತು ಎಲ್ಲಾ ಫರ್ಳ್ ನಮಾಜ್ ಗಳ ಬಳಿಕ ತಕ್ಬೀರ್ ಹೇಳುವುದು ಕೂಡ ಸುನ್ನತ್ ಅಥವಾ ಶ್ರೇಷ್ಠ ಕರ್ಮವಾಗಿದೆ. ಬಕ್ರೀದ್ ನಮಾಜ್ ಬಳಿಕ ಉಳ್ ಹಿಯತ್ ನೀಡುವ ಸಮಯ ಪ್ರಾರಂಭವಾಗಲಿದೆ.

error: Content is protected !! Not allowed copy content from janadhvani.com