janadhvani

Kannada Online News Paper

ರಸ್ತೆಯಲ್ಲಿ ನಮಾಝ್: ವಿಡಿಯೋ ಚಿತ್ರೀಕರಿಸಿದವರಿಗೂ,ಇತರ ಧರ್ಮೀಯ ಪ್ರಾರ್ಥನೆಗೂ ಸುಮೋಟೋ ಅನ್ವಯಿಸಲಿ

ಸ್ವಯಂ ಪ್ರೇರಿತ ಪ್ರಕರಣ ಒಂದೇ ಧರ್ಮದ ಅನುಯಾಯಿಗಳಿಗೆ ಅನ್ವಯವಾಗುವುದಲ್ಲ, ಸರ್ವರಿಗೂ ಅನ್ವಯವಾಗಲಿ.

ಮಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ಮಸೀದಿಯಲ್ಲಿ ಪ್ರಾರ್ಥನೆಗೆ ಜನ ತುಂಬಿ ಹೆಚ್ಚುವರಿ ಕೆಲವರು ರಸ್ತೆಯಲ್ಲಿ ನಮಾಝ್ ನಿರ್ವಹಿಸಿದ ಕಾರಣಕ್ಕೆ ಪೊಲೀಸರು ಸುಮೋಟೋ, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ನಮಾಝ್ ನಿರ್ವಹಣೆಯನ್ನು ವಿಡಿಯೋ ಚಿತ್ರೀಕರಿಸಿ ಉದ್ವಿಗ್ನ ಸೃಷ್ಟಿಸಲು ಪ್ರಯತ್ನಿಸಿದ ವ್ಯಕ್ತಿಯ ವಿರುದ್ಧ ಮತ್ತು ಇತರ ಧರ್ಮೀಯರ ರಸ್ತೆಯಲ್ಲಿನ ಪ್ರಾರ್ಥನೆಯ ವಿರುದ್ಧವೂ ಪೊಲೀಸರು ಇನ್ನು ಮುಂದೆ ಸ್ವಯಂ ಪ್ರಕರಣ ದಾಖಲಿಸಲಿ ಎಂದು ಕೆ.ಅಶ್ರಫ್ ಪ್ರತಿಕ್ರಿಯಿಸಿದ್ದಾರೆ.

ಆರಾಧನಾ ಕೇಂದ್ರಗಳಲ್ಲಿ ಜನ ಜಮಾವಣೆ ಅಧಿಕವಾದಾಗ ಜನರು ಸಾಂದರ್ಭಿಕವಾಗಿ ಸಾರ್ವಜನಿಕ ಸ್ಥಳವನ್ನು ಅವಲಂಬಿಸುವುದು ವಾಡಿಕೆ. ಅದು ಉದ್ದೇಶ ಪೂರಕ ವಾಗಿರುವುದಿಲ್ಲ. ಆದರೆ ಈ ಘಟನೆಯನ್ನು ಚಿತ್ರೀಕರಿಸಿ ವೈಭವೀಕರಿಸುವ ಮನಸ್ಥಿತಿ ಸರಿಯಲ್ಲ. ಇತ್ತೀಚೆಗೆ ರೈಲ್ವೆ ನಿಲ್ದಾಣದಲ್ಲಿ ಸಂಪೂರ್ಣ ಪ್ಲಾಟ್ ಫಾರಂ ಅನ್ನು ಉಪಯೋಗಿಸಿ ಮಂತ್ರ ವಾಚನ ಪಠಿಸಿ ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಆಚರಣೆ ಗೈಯುವಾಗ ಪೊಲೀಸರು ಎಲ್ಲಿದ್ದರು ಎಂದು ಉತ್ತರಿಸಬೇಕಿದೆ.

ಸ್ವಯಂ ಪ್ರೇರಿತ ಪ್ರಕರಣ ಒಂದೇ ಧರ್ಮದ ಅನುಯಾಯಿಗಳಿಗೆ ಅನ್ವಯ ವಾಗುವುದಿಲ್ಲ. ಸರ್ವರಿಗೂ ಅನ್ವಯವಾಗಲಿ. ಕೇವಲ ಐದು ನಿಮಿಷದ ನಮಾಝ್ ಪ್ರಾರ್ಥನೆ ರಸ್ತೆಯಲ್ಲಿ ತೊಂದರೆ ಆಗುವುದಾದಾರೆ, ದಿನಗಟ್ಟಲೆ ರಸ್ತೆಗಳನ್ನು ತಡೆ ನಿರ್ಮಿಸಿ ಜರುಗುವ ಧಾರ್ಮಿಕ ಆಚರಣೆಗಳು ಏನನ್ನು ಸೂಚಿಸುತ್ತದೆ ಎಂದು ಪೊಲೀಸರು ಸಾರ್ವಜನಿಕರಿಗೆ ಉತ್ತರಿಸಬೇಕಿದೆ. ಪೊಲೀಸರು ಪಕ್ಷಪಾತಿಯ ಧೋರಣೆ ಅನುಸರಿಸಿದರೆ ಹೋರಾಟ ಮುಂದುವರಿಯಲಿದೆ ಎಂದು ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

error: Content is protected !! Not allowed copy content from janadhvani.com