ದಮ್ಮಾಮ್: ಸೌದಿ ಅರೇಬಿಯಾದ ದಮಾಮ್ ನಲ್ಲಿ ನೆಲೆಸಿರುವ ಕರಾವಳಿಯ ಅನಿವಾಸಿ ಭಾರತೀಯ ಕುಟುಂಬವೊಂದು ವಾಸಿಸುತ್ತಿದ್ದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ, ಮೂರು ವರ್ಷದ ಮಗುವೊಂದು ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ. ಮನೆಯೊಳಗಿದ್ದ ರೆಫ್ರಿಜರೇಟರ್‌ನ ಕಂಪ್ರೆಸರ್ ಸ್ಫೋಟಗೊಂಡ ಪರಿಣಾಮ ಅಗ್ನಿ ದುರಂತ ಸಂಭವಿಸಿದೆ.
ಮೂಡಬಿದ್ರೆಯ ಕೋಟೆಬಾಗಿಲು ಮೂಲದ ಶೇಖ್ ಫಹದ್ ಮತ್ತು ಸಲ್ಮಾ ಕಾಝಿ ದಂಪತಿಯ ಕಿರಿಯ ಪುತ್ರ ಸಾಯಿಕ್ ಶೇಖ್ (3) ಮೃತಪಟ್ಟಿದೆ. ಭಾರೀ ಹೊಗೆಯಿಂದ ಉಸಿರುಕಟ್ಟಿದ ಕಾರಣ ಮರಣ ಸಂಭವಿಸಿದೆ. ದಮ್ಮಾಮ್ ಅಲ್ ಹುಸೇನಿ ಕಾಂಪೌಂಡ್‌ನಲ್ಲಿರುವ ವಿಲ್ಲಾದಲ್ಲಿ ಈ ದುರ್ಘಟನೆ ನಡೆದಿದೆ. ಹಿರಿಯ ಮಗ ಸಾಹಿರ್ ಶೇಖ್ (5) ಹೊರತುಪಡಿಸಿ ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭಾನುವಾರ ಮಧ್ಯರಾತ್ರಿ ವಿಲ್ಲಾದ ನೆಲ ಮಹಡಿಯಲ್ಲಿದ್ದ ರೆಫ್ರಿಜರೇಟರ್ ಭಾರೀ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿ ವ್ಯಾಪಿಸಿದೆ. ಇದರೊಂದಿಗೆ ಇಡೀ ಕೋಣೆಯಲ್ಲಿ ಕಪ್ಪು ಹೊಗೆ ತುಂಬಿತ್ತು. ನಿದ್ದೆಯಿಂದ ಎದ್ದ ಮನೆಯವರು ದಟ್ಟ ಹೊಗೆಯಿಂದಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮನೆಯವರು ಕಾಂಪೌಂಡ್‌ನ ಸಿಬ್ಬಂದಿಯನ್ನು ಕರೆದು ರಕ್ಷಿಸುವಂತೆ ಮನವಿ ಮಾಡಿದರು. ಜನರು ಧಾವಿಸಿದರಾದರೂ, ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.
ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ ಬಳಿಕ ಮನೆಯವರನ್ನು ಹೊರಗೆ ತರಲಾಯಿತು. ಆ ವೇಳೆಗಾಗಲೇ ಅವರು ಭಾರೀ ಹೊಗೆಯನ್ನು ಸೇವಿಸಿ ಪ್ರಜ್ಞಾಹೀನರಾಗಿದ್ದರು. ಚಿಂತಾಜನಕ ಸ್ಥಿತಿಯಲ್ಲಿರುವ ಶೇಖ್ ಫಹದ್ ಅವರನ್ನು ದಮ್ಮಾಮ್ ಅಲ್ಮಾನಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮತ್ತು ಅವರ ಪತ್ನಿ ಸಲ್ಮಾ ಕಾಝಿ ಅವರನ್ನು ದಮ್ಮಾಮ್ ವೈದ್ಯಕೀಯ ಸಂಕೀರ್ಣದ ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ. ಹಿರಿಯ ಪುತ್ರ ಸಾಹಿರ್ ಶೇಖ್ ಚೇತರಿಸಿಕೊಂಡಿದ್ದಾನೆ. ಅಗ್ನಿಶಾಮಕ ದಳ ಬರುವಷ್ಟರಲ್ಲಿ ಸಾಯಿಕ್ ಶೇಖ್ ಎಂಬ ಮೂರು ವರ್ಷದ ಮಗು ಮೃತಪಟ್ಟಿತ್ತು.