ಬೆಂಗಳೂರು, ಏ.26- ದೇಶದ ಭವಿಷ್ಯದ ಮುನ್ನುಡಿ ಬರೆಯುವ ಲೋಕಸಭೆ ಚುನಾವಣೆಯ ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಮತದಾನ ಬೆಳಗ್ಗೆಯಿಂದಲೇ ಬಿರುಸಿನಿಂದ ಕೂಡಿದ್ದು ಒಟ್ಟಾರೆ ಶೇ.64.57ರಷ್ಟು ಮತದಾನ ಆಗಿದೆ. ಈ ಪೈಕಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಶೇ.74.87ರಷ್ಟು ಮತದಾನ ಆಗಿದ್ದರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಶೇ.49.37ರಷ್ಟು ಮತದಾನವಾಗಿದೆ.
ಎಂದಿನಂತೆ ರಾಜಧಾನಿ ಬೆಂಗಳೂರಿನ ಮತದಾರರಲ್ಲಿ ನಿರುತ್ಸಾಹ ಕಂಡುಬಂದಿದ್ದು, ಮತದಾನದ ಪ್ರಮಾಣ ನಿರೀಕ್ಷೆಯಂತೆ ಏರಿಕೆ ಆಗಿಲ್ಲ.ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲೂ ಜನರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದುದು ಕಂಡುಬಂತು.
ಹಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ. ಆರಂಭದಲ್ಲಿ ಕೈಕೊಟ್ಟ ಮತಯಂತ್ರ. ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪದಂತಹ ಸಣ್ಣ-ಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಯಾವುದೇ ರೀತಿಯ ಅಹಿತಕರ ಘಟನೆಗಳು ಈವರೆಗೆ ನಡೆದಿಲ್ಲ.
ಶೇಕಡವಾರು ಮತದಾನ: ಮಂಡ್ಯ-ಶೇ.74.87, ಕೋಲಾರ-ಶೇ.73.25, ಉಡುಪಿ ಚಿಕ್ಕಮಗಳೂರು-72.69, ದಕ್ಷಿಣ ಕನ್ನಡ-72.30, ಹಾಸನ- ಶೇ.72.13, ತುಮಕೂರು-ಶೇ.72.10, ಚಿಕ್ಕಬಳ್ಳಾಪುರ- ಶೇ.71.85, ಚಾಮರಾಜನಗರ-ಶೇ.69.86,ಚಿತ್ರದುರ್ಗ- 67.52, ಮೈಸೂರು- 67.55, ಬೆಂಗಳೂರು ಗ್ರಾಮಾಂತರ-ಶೇ.61.78, ಬೆಂಗಳೂರು ಉತ್ತರ- ಶೇ.51.51, ಬೆಂಗಳೂರು ಕೇಂದ್ರ-ಶೇ.49.77 ಹಾಗೂ ಬೆಂಗಳೂರು ದಕ್ಷಿಣ-ಶೇ.49.37ರಷ್ಟು ಮತದಾನವಾಗಿದೆ.
ಬೇಸಿಗೆಯ ಬಿಸಿಲಿನ ವಾತಾವರಣದ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದಲೆ ಬೆಂಗಳೂರು ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಮುಂದಾದರು. ರಾಜಕೀಯ ನಾಯಕರು, ಸಿನಿಮಾ ತಾರೆಯರು, ಕ್ರೀಡಾಪಟುಗಳು, ಗಣ್ಯ ವ್ಯಕ್ತಿಗಳು ತಮ್ಮ-ತಮ್ಮ ಮತಗಟ್ಟೆಗಳಲ್ಲಿ ಜನ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದು ವಿಶೇಷವಾಗಿತ್ತು.
ರಾಜಧಾನಿ ಬೆಂಗಳೂರಿನ ಲೋಕಸಭಾ ಕ್ಷೇತ್ರಗಳಿಗಿಂತ ಗ್ರಾಮೀಣ ಭಾಗದ ಕ್ಷೇತ್ರಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಹುತೇಕ ಕಡೆ ಸಂಜೆ 6 ಗಂಟೆಯ ಸಮಯದಲ್ಲಿಯೂ ಮತದಾರರು ತಮ್ಮ ಹಕ್ಕು ಚಲಾಯಿಸಲು ಸಾಲಿನಲ್ಲಿ ನಿಂತಿದ್ದರು. ಕೇಂದ್ರ ಚುನಾವಣಾ ಆಯೋಗವು 14 ಕ್ಷೇತ್ರಗಳಲ್ಲಿ ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಿತ್ತು.
ಮತಯಂತ್ರಗಳಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ:
14 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಟ್ಟು 247 ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದ್ದು, ಬಿಗಿ ಬಂದೋಬಸ್ತ್ ಮೂಲಕ ಮತಯಂತ್ರಗಳನ್ನು ಜಿಲ್ಲಾ ಕೇಂದ್ರಗಳಲ್ಲಿರುವ ಸ್ಟ್ರಾಂಗ್ ರೂಂಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯದ ಇನ್ನುಳಿದ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದ್ದು, ಜೂ.4ರಂದು ಮತಗಳ ಎಣಿಕೆ ನಡೆದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.