ಮಂಗಳೂರು, ಎ.26: ವಿದೇಶದಲ್ಲಿ ಅದರಲ್ಲೂ ಗಲ್ಫ್ ರಾಷ್ಟ್ರಗಳಲ್ಲಿ ಉದ್ಯಮ ಹೊಂದಿರುವ, ಉದ್ಯೋಗ ಮಾಡುತ್ತಿರುವ ದ.ಕ. ಮತ್ತು ಉಡುಪಿ ಜಿಲ್ಲೆಯ ನೂರಾರು ಕನ್ನಡಿಗರು ಇಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ.
ತಮ್ಮ ಹಕ್ಕುಗಳನ್ನು ಚಲಾಯಿಸಲೆಂದೇ 2-3 ದಿನಗಳ ಹಿಂದೆ ವಿದೇಶದಿಂದ ತವರೂರಿಗೆ ಬಂದಿರುವ ಈ ಅನಿವಾಸಿ ಕನ್ನಡಿಗರು ಮತ ಚಲಾಯಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಸೌದಿ ಅರೇಬಿಯಾದ ಅಲ್ ಮುಝೈನ್ ಕಂಪೆನಿಯ ಸಿಇಒ ಝಕರಿಯಾ ಜೋಕಟ್ಟೆ, ಎಕ್ಸ್ ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪೆನಿ ಲಿ.ನ ನಿರ್ದೇಶಕ ಶೇಖ್ ಕರ್ನಿರೆ, ದುಬೈಯಲ್ಲಿರುವ ಖ್ಯಾತ ಉದ್ಯಮಿ, ಕೊಡುಗೈ ದಾನಿ ಹಾಗೂ ವಿಷನ್ ಕೊಂಕಣಿಯ ಪ್ರವರ್ತಕ ಮೈಕಲ್ ಡಿಸೋಜ ದಂಪತಿ, ಉದ್ಯಮಿಗಳಾದ ಸತೀಶ್ ಕುಮಾರ್ ಬಜಾಲ್, ಅಯಾಝ್ ಕೈಕಂಬ, ಇಬ್ರಾಹೀಂ ಪಡುಬಿದ್ರೆ, ಸಲಾಂ ಪಡುಬಿದ್ರೆ ಮತ್ತಿತರರು ಮತ ಚಲಾಯಿಸಲೆಂದೆ ಬಂದು ಗಮನ ಸೆಳೆದಿದ್ದಾರೆ. ಸೌದಿಯ ಅನಿವಾಸಿ ಭಾರತೀಯರ ಸಂಘದ ಬಹುತೇಕ ಪದಾಧಿಕಾರಿಗಳು ಮತದಾನಕ್ಕಾಗಿ ಬಂದಿದ್ದಾರೆ.
ಹೀಗೆ ಇನ್ನೂ ನೂರಾರು ಮಂದಿ ಮತ ಚಲಾಯಿಸಲು ವಿದೇಶಗಳಿಂದ ಬಿಡುವು ಮಾಡಿಕೊಂಡು ಬಂದಿದ್ದಾರೆ.
“ಇದು ಕೇವಲ ಮತದಾನವಲ್ಲ, ಇದು ಪ್ರಜಾಪ್ರಭುತ್ವದ ಹಬ್ಬವೂ ಆಗಿದೆ. ಈ ಹಬ್ಬದಲ್ಲಿ ನಾವು ಸಂತೋಷದಿಂದಲೇ ಪಾಲ್ಗೊಂಡಿದ್ದೇವೆ. ನಮ್ಮ ಹಕ್ಕುಗಳನ್ನು ಚಲಾಯಿಸಿದ್ದೇವೆ. ದೇಶದಲ್ಲಿ ಮಹತ್ವದ ಬದಲಾವಣೆಗೆ ಇದು ನಾಂದಿ ಹಾಡಲಿ” ಎಂದು ಉದ್ಯಮಿ ಹಾಗೂ ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಕಳೆದ ಬಾರಿ ನಡೆದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಕೋಶಾಧಿಕಾರಿ ಅಯಾಝ್ ಕೈಕಂಬ ಪ್ರತಿಕ್ರಿಯಿಸಿದ್ದಾರೆ.
”ಪರಸ್ಪರ ಪ್ರೀತಿ, ಸೌಹಾರ್ದ ಮೂಡಿಬರಬೇಕು. ದ.ಕ. ಜಿಲ್ಲೆಯಲ್ಲಿ ಗತಕಾಲದ ವೈಭವ ಪುನರಾವರ್ತನೆಯಾಗಬೇಕು. 33 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೆಲಸ ಕಾರ್ಯಗಳು ಮತ್ತೆ ಮರುಕಳಿಸಬೇಕು. ಸಾಕಷ್ಟು ಕೈಗಾರಿಕೆಗಳು ಸ್ಥಾಪನೆಗೊಳ್ಳಬೇಕು. ಉದ್ಯೋಗ ಸೃಷ್ಟಿಯಾಗಬೇಕು. ಜಾತಿ, ಧರ್ಮದ ಹೆಸರಿನಲ್ಲಿ ಸಮಸ್ಯೆ ಸೃಷ್ಟಿಸಿಕೊಳ್ಳದೆ, ಅಪನಂಬಿಕೆಯನ್ನುಂಟು ಮಾಡಬಾರದು. ಸಮಾಜದಲ್ಲಿ ಶಾಂತಿ ನೆಲೆಸಬೇಕು. ಅದಕ್ಕಾಗಿ ನಾವು ವಿದೇಶದಲ್ಲಿದ್ದರೂ ಊರಿಗೆ ಬಂದು ನಮ್ಮ ಹಕ್ಕುಗಳನ್ನು ಚಲಾಯಿಸಿದ್ದೇವೆ. ದೇಶದಲ್ಲಿ ಸುಭದ್ರ ಸರಕಾರ ನಿರ್ಮಿಸುವುದೇ ನಮ್ಮ ಆಶಯವಾಗಿದೆ” ಎಂದು ಉದ್ಯಮಿ ಹಾಗೂ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಸತೀಶ್ ಕುಮಾರ್ ಬಜಾಲ್ ಪ್ರತಿಕ್ರಿಯಿಸಿದ್ದಾರೆ.
Show baji ashtte
GOOD JOB! THANKS TO ALL