ಗಾಝ ನಗರ: ಗಾಝದಲ್ಲಿ, ಇಸ್ರೇಲ್ ನಡೆಸಿದ ವಾಯು ಮತ್ತು ಭೂ ದಾಳಿಯಿಂದ ನಾಶವಾದ ಅಲ್ ಶಿಫಾ ಆಸ್ಪತ್ರೆ ಸೇರಿದಂತೆ ಎರಡು ಸ್ಥಳಗಳಲ್ಲಿ ಸಾಮೂಹಿಕ ಸಮಾಧಿಗಳು ಪತ್ತೆಯಾಗಿವೆ.
ಇವುಗಳು ಇಸ್ರೇಲ್ ಸೇನೆ ಸಾಮೂಹಿಕ ಹತ್ಯೆ ನಡೆಸಿ ಸಮಾಧಿ ಮಾಡಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 400 ಕ್ಕೂ ಹೆಚ್ಚು ಜನರ ಮೃತ ದೇಹಗಳೆಂದು ವರದಿಯಾಗಿದೆ.
https://x.com/HoyPalestina/status/1779870816248680949?t=1cgb53AGl702xdVqL6FsFw&s=08
ಉತ್ತರ ಗಾಝ ಪಟ್ಟಿಯ ಎರಡು ಸ್ಥಳಗಳಲ್ಲಿ ಗಾಝ ಆರೋಗ್ಯ ಮತ್ತು ನಾಗರಿಕ ಸಚಿವಾಲಯ ಹಾಗೂ
ನಾಗರಿಕ ರಕ್ಷಣಾ ಪಡೆಯು ಸಾಮೂಹಿಕ ಸಮಾಧಿಗಳನ್ನು ಪತ್ತೆ ಹಚ್ಚಿದೆ. ಒಂದು ಸಾಮೂಹಿಕ ಸಮಾಧಿಯು ಇಸ್ರೇಲ್ ಧ್ವಂಸ ಮಾಡಿರುವ ಅಲ್ ಶಿಫಾ ಆಸ್ಪತ್ರೆಯಲ್ಲೂ ಮತ್ತೊಂದು
ಬೈತ್ ಲಾಹಿಯಾದಲ್ಲೂ ಪತ್ತೆ ಹಚ್ಚಲಾಗಿದೆ.
ಬೈತ್ ಲಾಹಿಯಾದಲ್ಲಿ 20 ಮೃತದೇಹಗಳು ಪತ್ತೆಯಾಗಿವೆ. ಎರಡು ವಾರಗಳ ಕಾಲ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ್ದ ಇಸ್ರೇಲಿ ಸೇನೆಯು ಪ್ಯಾಲೆಸ್ಟೀನಿಯನ್ನರನ್ನು ಕಗ್ಗೊಲೆ ಮಾಡಿ ಸಾಮೂಹಿಕ ಸಮಾಧಿಗಳಿಂದ ಮುಚ್ಚಿತ್ತು.
ಮೃತದೇಹಗಳು ಸಂಪೂರ್ಣ ಕೊಳೆತು ಹೋಗದ ಕಾರಣ ಇತ್ತೀಚೆಗೆ ಹೂಳಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಹಲವು ಮೃತದೇಹಗಳಲ್ಲಿ ವೈದ್ಯಕೀಯ ಬ್ಯಾಂಡೇಜ್ ಮತ್ತು ಕ್ಯಾತಿಟರ್ ಕಂಡು ಬಂದಿರುವುದರಿಂದ , ರೋಗಿಗಳನ್ನು ಹತ್ಯೆ ಮಾಡಿ ಸಮಾಧಿ ಮಾಡಿರುವುದು ದೃಢಪಟ್ಟಿದೆ.
ಮೃತದೇಹಗಳನ್ನು ಗುರುತಿಸಿರುವ ಕುಟುಂಬಸ್ಥರು ಮೃತರು ರೋಗಿಗಳು, ಗಾಯಳುಗಳಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೆಂದು ಖಚಿತಪಡಿಸಿದ್ದಾರೆ. ಅವರಲ್ಲಿ ಓರ್ವ ವೃದ್ಧ, ಮಹಿಳೆ ಮತ್ತು 20 ವರ್ಷದ ಯುವಕ ಸೇರಿದ್ದಾರೆ. ಆಸ್ಪತ್ರೆಯ ಮುಖ್ಯದ್ವಾರದ ಮುಂಭಾಗದಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. ಜನರನ್ನು ಕೊಂದು ಸಮಾಧಿ ಮಾಡುವುದನ್ನು ತಾವು ಕಣ್ಣಾರೆ ಕಂಡಿದ್ದೇವೆ ಎಂದು Becoming ಸಿಬ್ಬಂದಿಯೂ ಹೇಳುತ್ತಾರೆ.
ಚಿಕಿತ್ಸೆಗೆ ಬಂದವರು, ಆರೋಗ್ಯ ಕಾರ್ಯಕರ್ತರು ಮತ್ತು ಆಶ್ರಯ ಪಡೆದವರು ಸೇರಿದಂತೆ ಸುಮಾರು 300 ಜನರನ್ನು ಎರಡು ವಾರಗಳಲ್ಲಿ ಇಸ್ರೇಲ್ ಆಸ್ಪತ್ರೆಯೊಳಗೆ ಗುಂಡಿಕ್ಕಿ, ಅನ್ನಾಹಾರ ತಡೆದು ಮತ್ತು ಹೊಡೆದು ಕೊಂದಿತು. ಸತ್ತವರ ದೇಹಗಳ ಮೇಲೆ ಟ್ಯಾಂಕ್‌ಗಳನ್ನು ಚಲಾಯಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಈ ಹಿಂದೆ ಬಹಿರಂಗಪಡಿಸಿದ್ದರು. ಆರೋಗ್ಯ ಕಾರ್ಯಕರ್ತರು, ಗಾಯಗೊಂಡವರು ಮತ್ತು ಮಹಿಳೆಯರು ಸೇರಿದಂತೆ 180 ಕ್ಕೂ ಹೆಚ್ಚು ಜನರನ್ನು ಸೇನೆಯು ಬಂಧಿಸಿ ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಿತ್ತು .
ಆಸ್ಪತ್ರೆ ಸಂಕೀರ್ಣ ಮತ್ತು ಸುತ್ತಮುತ್ತಲಿನ ಕಟ್ಟಡಗಳನ್ನು ಧ್ವಂಸ ಮಾಡಿದ ಬಳಿಕ ಇಸ್ರೇಲಿ ಪಡೆಗಳು ಇಲ್ಲಿಂದ ಮರಳಿತ್ತು . ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿತ್ತು ಮತ್ತು ಕಾಂಕ್ರೀಟ್ ರಾಶಿಗಳಿಗೆ ಬಾಂಬ್ ಹಾಕಲಾಗಿತ್ತು . ಆಸ್ಪತ್ರೆಯ ರಸ್ತೆಯನ್ನು ಬುಲ್ಡೋಜರ್ ಬಳಸಿ ಅಗೆಯಲಾಗಿತ್ತು .
ಗಾಜಾದಲ್ಲಿ ಯುದ್ಧ ಆರಂಭವಾದಾಗಿನಿಂದ ಅಲ್ ಶಿಫಾ ಆಸ್ಪತ್ರೆ ಮೇಲೆ ಇಸ್ರೇಲ್ ನಾಲ್ಕು ಬಾರಿ ದಾಳಿ ನಡೆಸಿದೆ.