ಜಿದ್ದಾ: ಉಮ್ರಾ ವೀಸಾ ಕಾಲಾವಧಿ ಸಂಬಂಧಿಸಿದಂತೆ ಸಚಿವಾಲಯದಿಂದ ಬಂದ ಎರಡು ವಿಭಿನ್ನ ಅಭಿಪ್ರಾಯದಿಂದ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ. ಉಮ್ರಾ ವೀಸಾದಲ್ಲಿ ಆಗಮಿಸಿರುವ ಎಲ್ಲರೂ ಜೂನ್ 6 ರ ಮುಂಚಿತವಾಗಿ ಸೌದಿ ಅರೇಬಿಯಾದಿಂದ ಮರಳಬೇಕು ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಸ್ಪಷ್ಟಪಡಿಸಿದೆ.
ಹಜ್ ಮತ್ತು ಉಮ್ರಾ ಸಚಿವಾಲಯವು ಈ ವರ್ಷ ಉಮ್ರಾಕ್ಕೆ ಹೋಗುವ ಯಾತ್ರಾರ್ಥಿಗಳಿಗೆ ದುಲ್ ಖಅದ್ 29 ಅಥವಾ ಜೂನ್ 6 ರ ಮೊದಲು ದೇಶವನ್ನು ತೊರೆಯುವಂತೆ ಸಲಹೆ ನೀಡಿತ್ತು.ಆದರೆ, ನಿನ್ನೆ ಹಜ್ ಮತ್ತು ಉಮ್ರಾ ಸಚಿವಾಲಯವು ‘ಎಕ್ಸ್’ ವೇದಿಕೆಯಲ್ಲಿ ನೀಡಿದ ವಿವರಣೆಯು ಉಮ್ರಾ ಯಾತ್ರಿಕರಲ್ಲಿ ಗೊಂದಲವನ್ನು ಸೃಷ್ಟಿಸಿತ್ತು. ವಿದೇಶೀ ಉಮ್ರಾ ಯಾತ್ರಿಕರ ವೀಸಾ ಕಾಲವಧಿ ದುಲ್ ಖಅದ 15 (ಮೇ.23) ರಂದು ಮುಕ್ತಾಯಗೊಳ್ಳಲಿದೆ ಎಂದು ‘ಎಕ್ಸ್’ ನಲ್ಲಿ ಹೇಳಿಕೆ ನೀಡಿತ್ತು.
ಇದೀಗ ಸಚಿವಾಲಯದಿಂದ ಸ್ಪಷ್ಟೀಕರಣ ಬಂದಿದ್ದು, ಜೂನ್ 6ರ ವರೆಗೆ ಸೌದಿ ಅರೇಬಿಯಾದಲ್ಲಿ ಉಳಿಯಬಹುದು ಎಂದು ಹೇಳಿದೆ. ಅಲ್ಲದೇ, ಉಮ್ರಾ ವೀಸಾಗಳ ಸಾಮಾನ್ಯ ಅವಧಿಯು ಮೂರು ತಿಂಗಳುಗಳಾಗಿವೆ. ವೀಸಾ ಅವಧಿಯನ್ನು ದೇಶಕ್ಕೆ ಪ್ರವೇಶಿಸಿದ ದಿನಾಂಕದಿಂದಲೇ ಲೆಕ್ಕಹಾಕಲಾಗುತ್ತದೆ ಎಂದು ಮತ್ತೆ ಸ್ಪಷ್ಟಪಡಿಸಿದೆ.
ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕೆ ಪ್ರವೇಶಿಸುವ ಕೊನೆಯ ದಿನಾಂಕ ದುಲ್ ಖಅದ 15(ಮೇ.23) ಆಗಿದೆ.
ಪ್ರತಿ ವರ್ಷ ಹಜ್ ಯಾತ್ರೆಗೆ ಮುನ್ನ ನಿಯಂತ್ರಣ ಹೇರಲಾಗುತ್ತದೆ. ಹಜ್ ಸಿದ್ಧತೆಗಳ ಭಾಗವಾಗಿ, ಪ್ರತಿ ವರ್ಷ ಉಮ್ರಾ ವೀಸಾಗಳ ಮೇಲೆ ನಿರ್ಬಂಧಗಳನ್ನು ಇರಿಸಲಾಗುತ್ತದೆ.ಸಚಿವಾಲಯವು ಉಮ್ರಾ ಕಂಪನಿಗಳು ಮತ್ತು ಏಜೆನ್ಸಿಗಳಿಗೆ ಈ ಸಂಬಂಧ ಆದೇಶವನ್ನು ನೀಡಿದೆ.
ವೀಸಾ ಇನ್ನೂ ಮಾನ್ಯವಾಗಿದ್ದರೂ ನಿಗದಿತ ದಿನಾಂಕದೊಳಗೆ ಹಿಂತಿರುಗುವುದು ಕಡ್ಡಾಯವಾಗಿದೆ. ಇದರ ನಂತರವೂ ದೇಶದಲ್ಲಿ ಉಳಿಯುವವರಿಗೆ ಕಠಿಣ ದಂಡ ವಿಧಿಸಲಾಗುವುದು ಎಂದು ಸಚಿವಾಲಯ ಎಚ್ಚರಿಸಿದೆ.
ಹೊಸ ಉಮ್ರಾ ಯಾತ್ರಿಕರ ವೀಸಾದಲ್ಲಿ ಹಿಂದಿರುಗಬೇಕಾದ ಕೊನೆಯ ದಿನಾಂಕವನ್ನು ಒಳಗೊಂಡಂತೆ ವಿಶೇಷವಾಗಿ ದಾಖಲಿಸಲಾಗಿದೆ. ಹಜ್ ವಿಧಿವಿಧಾನಗಳು ಪೂರ್ಣಗೊಂಡ ನಂತರ, ಹೊಸ ಉಮ್ರಾ ಯಾತ್ರಿಕರಿಗೆ ಮೊಹರಂನ ಮೊದಲ ದಿನದಂದು ದೇಶವನ್ನು ಪ್ರವೇಶಿಸಲು ಅನುಮತಿಸಲಾಗುತ್ತದೆ.