ಅಬುಧಾಬಿ: ಈದುಲ್ ಫಿತರ್ ಹಬ್ಬಕ್ಕೆ ಸಂಬಂಧಿಸಿದಂತೆ ಯುಎಇಯಲ್ಲಿ ಖಾಸಗಿ ವಲಯಕ್ಕೆ ರಜೆ ಘೋಷಿಸಲಾಗಿದೆ. ಯುಎಇ ಮಾನವ ಸಂಪನ್ಮೂಲ ಮತ್ತು ಸ್ವದೇಶೀಕರಣ ಸಚಿವಾಲಯವು ಖಾಸಗಿ ವಲಯದ ಉದ್ಯೋಗಿಗಳಿಗೆ ಸೋಮವಾರ ರಜೆ ಘೋಷಿಸಿದೆ.
ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ನಾಲ್ಕು ದಿನಗಳ ಹಬ್ಬದ ರಜೆ ಸಿಗಲಿದೆ. ಸೋಮವಾರ ರಮಳಾನ್ 29 (ಏಪ್ರಿಲ್ 8) ರಿಂದ ಶವ್ವಾಲ್ 3 ರವರೆಗೆ ರಜೆ ಲಭ್ಯವಿರುತ್ತದೆ. ಚಂದ್ರ ದರ್ಶನಕ್ಕೆ ಅನುಗುಣವಾಗಿ 4 ಅಥವಾ 5 ಪಾವತಿ ಸಹಿತವಿರುವ ರಜಾದಿನಗಳು ಲಭಿಸಲಿದೆ.
ಏತನ್ಮಧ್ಯೆ, ಯುಎಇ ಸರ್ಕಾರವು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಒಂದು ವಾರದ ಅವಧಿಯ ಈದುಲ್ ಫಿತರ್ ಹಬ್ಬದ ರಜೆಯನ್ನು ಘೋಷಿಸಿದೆ. ವಾರಾಂತ್ಯದ ರಜೆಗಳನ್ನೂ ಗಣನೆಗೆ ತೆಗೆದುಕೊಂಡರೆ ಒಟ್ಟು ಒಂಬತ್ತು ದಿನಗಳ ದೀರ್ಘ ರಜೆ ಸಿಗಲಿದೆ.
ಭಾನುವಾರ, ಯುಎಇ ಸರ್ಕಾರವು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಸಣ್ಣ ಹಬ್ಬದ ರಜೆಯನ್ನು ಘೋಷಿಸಿತು. ಸೋಮವಾರ, ಏಪ್ರಿಲ್ 8 ರಿಂದ ಭಾನುವಾರ, ಏಪ್ರಿಲ್ 14 ರವರೆಗೆ ರಜಾದಿನಗಳು ಲಭ್ಯವಿರುತ್ತವೆ. ಏಪ್ರಿಲ್ 15 ರಿಂದ ಕೆಲಸದ ಅವಧಿ ಪುನರಾರಂಭವಾಗಲಿದೆ. ಶನಿವಾರ ಮತ್ತು ಭಾನುವಾರ ಯುಎಇಯಲ್ಲಿ ಅಧಿಕೃತ ವಾರಾಂತ್ಯದ ರಜಾದಿನಗಳಾಗಿದ್ದು, ಫೆಡರಲ್ ಸರ್ಕಾರಿ ಉದ್ಯೋಗಿಗಳಿಗೆ ಒಂಬತ್ತು ದಿನಗಳ ರಜೆ ಲಭಿಸಲಿದೆ.
ಶವ್ವಾಲ್ ಮೊದಲ ದಿನದಂದು ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ಚಂದ್ರ ದರ್ಶನವಾಗಲಿ, ಇಲ್ಲದಿರಲಿ ಏಪ್ರಿಲ್ 8ರಿಂದ ರಜೆ ಆರಂಭವಾಗಲಿದೆ. ದೇಶದಲ್ಲಿ ಈ ವರ್ಷದ ಅತಿ ದೀರ್ಘ ರಜೆಯಾಗಲಿದೆ ಇದು. ಶಾರ್ಜಾ ಮತ್ತು ದುಬೈ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಒಂದು ವಾರದ ಕಿರು ಈದ್ ರಜೆಯನ್ನು ಘೋಷಿಸಿವೆ.