ಮಕ್ಕಾ: ಪವಿತ್ರ ರಂಜಾನ್ ತಿಂಗಳ ಮೊದಲ ಜುಮುಆ ನಮಾಝ್ ನಲ್ಲಿ ಭಾಗವಹಿಸಲು ಎರಡು ಹರಮ್ ಗಳಿಗೆ ಲಕ್ಷಾಂತರ ಮಂದಿ ವಿಶ್ವಾಸಿಗಳು ಆಗಮಿಸಿದ್ದರು. ಪ್ರಪಂಚದ ವಿವಿಧ ಭಾಗಗಳಿಂದ ಯಾತ್ರಾರ್ಥಿಗಳ ಹೊರತಾಗಿ, ಶುಕ್ರವಾರದ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳಲು ಮಕ್ಕಾ, ಮದೀನಾ ಮತ್ತು ಸೌದಿ ಅರೇಬಿಯಾದ ವಿವಿಧ ದಿಕ್ಕಿನಿಂದ ವಿಶ್ವಾಸಿಗಳ ಹರಿವು ಗುರುವಾರ ರಾತ್ರಿಯಿಂದಲೇ ಪ್ರಾರಂಭವಾಗಿತ್ತು.
ಜುಮುಆಗೆ ಮುನ್ನ ಎಂದಿಗಿಂತಲೂ ಮುಂಚೆಯೇ ಮಕ್ಕಾ ಹರಮ್‌ನ ಒಳ, ಹೊರ ಮತ್ತು ಮೇಲಿನ ಮಹಡಿಗಳು ತುಂಬಿ ತುಳುಕುತ್ತಿದ್ದವು. ಆರಾಧಕರ ಸಾಲುಗಳು ಹರಮ್‌ನ ಅಂಗಳವನ್ನು ಮೀರಿ ರಸ್ತೆಗಳವರೆಗೆ ವಿಸ್ತರಿಸಿದವು. ಪ್ರಾರ್ಥನೆ ಮುಗಿಸಿ ಹರಂನಿಂದ ಹೊರ ಬರಲು ವಿಶ್ವಾಸಿಗಳಿಗೆ ಗಂಟೆಗಟ್ಟಲೆ ಕಾಯಬೇಕಾಯಿತು.
ಮಕ್ಕಾ ಮತ್ತು ಮದೀನಾ ಸುತ್ತಮುತ್ತಲಿನ ಪ್ರದೇಶಗಳಿಂದ ಹರಮ್‌ಗಳಲ್ಲಿ ಜುಮುಆಗೆ ಹಾಜರಾಗಲು ಬಂದ ಹೆಚ್ಚಿನವರು ಇಫ್ತಾರ್ ಮತ್ತು ರಾತ್ರಿ ತರಾವೀಹ್ ಪ್ರಾರ್ಥನೆಯಲ್ಲಿ ಭಾಗವಹಿಸಿದ ನಂತರ ಹರಮ್‌ಗಳಿಗೆ ಬೀಳ್ಕೊಟ್ಟರು. ಮಕ್ಕಾದಲ್ಲಿ ಶೈಖ್ ಬಂದರ್ ಬಲೀಲಾ ಮತ್ತು ಮದೀನಾದಲ್ಲಿ ಡಾ ಹುಸೈನ್ ಆಲ್ ಶೈಖ್ ರಂಜಾನ್ ಮೊದಲ ಶುಕ್ರವಾರದ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಎರಡೂ ಹರಂ ಕಚೇರಿ ಮುಖ್ಯಸ್ಥ ಡಾ. ಅಬ್ದುರ್ರಹ್ಮಾನ್ ಅಲ್ ಸುದೈಸ್ ಅವರ ಮೇಲ್ವಿಚಾರಣೆಯಲ್ಲಿ, ಜುಮುಆಗೆ ಬಂದವರನ್ನು ಸ್ವೀಕರಿಸಲು ಎಲ್ಲಾ ಮಾನವ ಮತ್ತು ಯಾಂತ್ರಿಕ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಯಿತು. ಹರಂಗಳ ಹೆಚ್ಚಿನ ಗೇಟ್‌ಗಳನ್ನು ತೆರೆಯಲಾಗಿದ್ದರೂ, ಫುಟ್‌ಪಾತ್‌ಗಳನ್ನು ಒದಗಿಸುವ ಮೂಲಕ ಪ್ರವೇಶವನ್ನು ನಿಯಂತ್ರಿಸಲಾಯಿತು. ಹರಮ್‌ಗೆ ತೆರಳುವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದ್ದು, ಪಾದಚಾರಿಗಳ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.