ಬೆಂಗಳೂರು: ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಹಿನ್ನಲೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ಮತ ಕೇಳದೆ ಸದನದಿಂದ ಹೊರ ನಡೆಯುವ ಮೂಲಕ ಪ್ರಜಾಪ್ರಭುತ್ವಕ್ಕೆ ದೊಡ್ಡ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ಶುಕ್ರವಾರ ಸಭಾಧ್ಯಕ್ಷರ ಆಯ್ಕೆ ಬಳಿಕ, ವಿಶ್ವಾಸಮತ ಯಾಚನೆ ಪ್ರಸ್ತಾಪ ಮಂಡಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಭಾಷಣದ ನಂತರ ಮಾತನಾಡಿದ ಯಡಿಯೂರಪ್ಪ ಅವರು, ‘ಹಳೆಯ ಘಟನೆಗಳನ್ನು ಮೆಲುಕು ಹಾಕಿದರು. ರೈತರ ಸಾಲ ಮನ್ನಾ ವಿಚಾರ ಕುರಿತು ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ 57 ಸಾವಿರ ಕೋಟಿ ಸಾಲ, ಖಾಸಗಿಯವರ ಬಳಿ ಮಾಡಿರುವ ಸಾಲವನ್ನೂ ಮನ್ನಾ ಮಾಡುವುದಾಗಿ ಹೇಳಿದ್ದೀರಿ. ಅದರಂತೆ ಮನ್ನಾ ಮಾಡಿ. ಮಾತು ತಪ್ಪಿದರೆ, ಸೋಮವಾರ ಕರ್ನಾಟಕ ಬಂದ್ ಮಾಡುತ್ತೇವೆ’ ಎಂದು ಘೋಷಿಸಿದರು.
ಬಹುಮತ ಸಾಬೀತು ಮಾಡಿದ ಬಳಿಕ ವಿಧಾನಸೌಧದ ಹೊರಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ‘ಯಡಿಯೂರಪ್ಪ ಬಂದ್‌ಗೆ ಕರೆ ನೀಡುವ ಮೂಲಕ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಹಾಗಾಗಿ ರಾಜ್ಯದ ರೈತರು ಶಾಂತಿಯುತವಾಗಿ ವರ್ತಿಸಬೇಕು’ ಎಂದು ಮನವಿ ಮಾಡಿದರು