ನವದೆಹಲಿ: ಆರ್‌ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಎನ್‌ಐಎ ತನಿಖೆಗೆ ಆದೇಶಿಸಿರುವುದನ್ನು ಪ್ರಶ್ನಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಗುರುವಾರ ವಜಾಗೊಳಿಸಿದೆ.
ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎನ್‌ಐಎ) ವಹಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಪ್ರಕರಣದಲ್ಲಿ ಬಂಧಿತರಾಗಿದ್ದ ಇರ್ಫಾನ್ ಪಾಷಾ, ಆಸಿಮ್ ಷರೀಫ್ ಹಾಗೂ ಇತರರು ‘ಸುಪ್ರೀಂ‘ ಮೆಟ್ಟಿಲೇರಿದ್ದರು.
ಪಿಎಫ್ಐ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡದಿರಲು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ನವೀನ್ ಸಿನ್ಹಾ ಅವರಿದ್ದ ಪೀಠ ನಿರ್ಧರಿಸಿತು. ಮಾರ್ಚ್ 26ರಂದು ಕರ್ನಾಟಕ ಹೈಕೋರ್ಟ್ ಹೊರಡಿಸಿದ ಆದೇಶದಲ್ಲಿ ಯಾವುದೇ ತಪ್ಪು ಇಲ್ಲ ಎಂದು ಪೀಠ ಹೇಳಿತು. ಹೀಗಾಗಿ ಆರೋಪಿಗಳ ಪರ ವಕೀಲರು ವಿಶೇಷ ಮೇಲ್ಮನವಿ ಅರ್ಜಿಯನ್ನು ಹಿಂಪಡೆದರು.
2016ರ ಅಕ್ಟೋಬರ್ 16ರಂದು ಬೆಂಗಳೂರಿನಲ್ಲಿ ವಿಜಯದಶಮಿ ಕಾರ್ಯಕ್ರಮ ಮುಗಿಸಿ ವಾಪಸಾಗುವಾಗ ರುದ್ರೇಶ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿತ್ತು.