ರಿಯಾದ್: ದೊರೆ ಸಲ್ಮಾನ್ ಅವರ ಅತಿಥಿಗಳಾಗಿ ಸಾವಿರ ಮಂದಿ ವಿದೇಶಿಯರಿಗೆ ಈ ವರ್ಷ ಉಮ್ರಾ ನಿರ್ವಹಿಸಲು ಅವಕಾಶ ನೀಡಲಾಗಿದೆ. ಖಾದಿಮುಲ್ ಹರಮೈನ್ ಹಜ್ ಉಮ್ರಾ ಯೋಜನೆಯಡಿ ವಿವಿಧ ರಾಷ್ಟ್ರಗಳ 1,000 ಉಮ್ರಾ ಯಾತ್ರಾರ್ಥಿಗಳಿಗೆ ಅನುಮತಿ ನೀಡಲಾಗಿದೆ. ಧಾರ್ಮಿಕ ವ್ಯವಹಾರಗಳ ಇಲಾಖೆಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಪ್ರಪಂಚದಾದ್ಯಂತದ ಯಾತ್ರಾರ್ಥಿಗಳಿಗೆ ಆತಿಥ್ಯ ವಹಿಸಲು ಅವಕಾಶ ಕಲ್ಪಿಸಿದ ರಾಜ ಸಲ್ಮಾನ್ ಮತ್ತು ಕ್ರೌನ್ ಪ್ರಿನ್ಸ್ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಧಾರ್ಮಿಕ ವ್ಯವಹಾರಗಳ ಸಚಿವ ಡಾ. ಅಬ್ದುಲ್ಲತೀಫ್ ಬಿನ್ ಅಬ್ದುಲಝೀಝ್ ಆಲುಶೈಖ್ ಅಭಿನಂದನೆ ಸಲ್ಲಿಸಿದರು.
ಇಸ್ಲಾಂ ಮತ್ತು ಮುಸ್ಲಿಮರಿಗೆ ಸೇವೆ ಸಲ್ಲಿಸಲು, ಪ್ರಪಂಚದ ವಿವಿಧ ಭಾಗಗಳಲ್ಲಿ ಮುಸ್ಲಿಮರ ನಡುವೆ ಸಹೋದರ ಸಂಬಂಧಗಳನ್ನು ಬಲಪಡಿಸಲು ಮತ್ತು ಇಸ್ಲಾಮಿಕ್ ಚಟುವಟಿಕೆಯ ಕ್ಷೇತ್ರಗಳಲ್ಲಿನ ಜನರೊಂದಿಗೆ ಪರಿಣಾಮಕಾರಿ ಸಂವಹನದಲ್ಲಿ ಆಡಳಿತಗಾರರ ಹೆಚ್ಚಿನ ಗಮನವನ್ನು ಇದು ದೃಢಪಡಿಸುತ್ತದೆ ಎಂದು ಧಾರ್ಮಿಕ ವ್ಯವಹಾರಗಳ ಸಚಿವರು ಹೇಳಿದರು.
ಮುಸ್ಲಿಂ ಜಗತ್ತಿನ ಪ್ರಭಾವಿ ವ್ಯಕ್ತಿಗಳು, ಗಣ್ಯರು, ವಿದ್ವಾಂಸರು, ಶೈಖ್‌ಗಳು, ವಿಶ್ವವಿದ್ಯಾನಿಲಯ ಮತ್ತು ಇನ್‌ಸ್ಟಿಟ್ಯೂಟ್ ಪ್ರೊಫೆಸರ್‌ಗಳು ಸೇರಿದಂತೆ ವಿಶ್ವದಾದ್ಯಂತದ 1,000 ಪ್ರಮುಖ ಇಸ್ಲಾಮಿಕ್ ವ್ಯಕ್ತಿಗಳಿಗೆ ಉಮ್ರಾ ಮತ್ತು ಮದೀನಾದ ಮಸ್ಜಿದುನ್ನಬವಿಗೆ ಭೇಟಿ ನೀಡಲು ಖಾದಿಮುಲ್ ಹಜ್ ಉಮ್ರಾ ಯೋಜನೆಯಡಿ ಆತಿಥ್ಯ ನೀಡಲಾಗುವುದು ಎಂದು ಧಾರ್ಮಿಕ ವ್ಯವಹಾರಗಳ ಸಚಿವರು ಹೇಳಿದರು.