ರಿಯಾದ್: ಗಲ್ಫ್ ಸಹಕಾರ ಮಂಡಳಿ(GCC) ಯ ಸುಪ್ರೀಂ ಕೌನ್ಸಿಲ್ ಏಕೀಕೃತ ಪ್ರವಾಸಿ ವೀಸಾವನ್ನು ಅನುಮೋದಿಸಿದೆ, ಇದು ಪ್ರವಾಸಿಗರಿಗೆ ಒಂದೇ ವೀಸಾದಲ್ಲಿ ಎಲ್ಲಾ ಗಲ್ಫ್ ದೇಶಗಳಿಗೆ ಭೇಟಿ ನೀಡಲು ಅನುವು ಮಾಡಿಕೊಡುತ್ತದೆ ಎಂದು ಸೌದಿ ಪ್ರವಾಸೋದ್ಯಮ ಸಚಿವ ಅಹ್ಮದ್ ಅಲ್ ಖತೀಬ್ ಹೇಳಿದ್ದಾರೆ. ಕತಾರ್‌ನಲ್ಲಿ ನಡೆದ ಗಲ್ಫ್ ಸಹಕಾರ ಮಂಡಳಿಯ ರಾಜ್ಯ ಮುಖ್ಯಸ್ಥರ ಸಭೆ ನೀಡಿದ ಅಂತಿಮ ಹೇಳಿಕೆಯಲ್ಲಿ ವೀಸಾ ಘೋಷಣೆ ಮಾಡಲಾಗಿದೆ.
ಈ ನಿರ್ಧಾರವನ್ನು ಜಾರಿಗೆ ತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಗೃಹ ಮಂತ್ರಿಗಳಿಗೆ ಸುಪ್ರೀಂ ಕೌನ್ಸಿಲ್ ಅಧಿಕಾರ ನೀಡಿದೆ. ಇದು, ಪ್ರವಾಸಿ ತಾಣವೆಂಬ ನೆಲೆಯಲ್ಲಿ ಜಾಗತಿಕವಾಗಿ ಗಲ್ಫ್ ರಾಷ್ಟ್ರಗಳ ಸ್ಥಾನವನ್ನು ಹೆಚ್ಚಿಸಲಿದೆ. ಜಿಸಿಸಿ ರಾಷ್ಟ್ರಗಳ ಅಭಿವೃದ್ಧಿಗೆ ಇದು ಸೂಕ್ತ ನಿರ್ಧಾರ. ಇದು ದೇಶಗಳ ನಡುವಿನ ಪರಸ್ಪರ ಸಂಬಂಧಗಳನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಪ್ರಭಾವ ಬೀರಲಿದೆ. ಇದು ಜಿಸಿಸಿ ದೇಶಗಳಲ್ಲಿ ಪ್ರವಾಸಿಗರು ಮತ್ತು ವಲಸಿಗರಿಗೆ ಪ್ರಯಾಣವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಆ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಭಾರಿ ಬೆಳವಣಿಗೆಯಾಗಲಿದ್ದು, ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಪ್ರವಾಸಿಗರು ಒಂದೇ ವೀಸಾದೊಂದಿಗೆ ಯುಎಇ ಮತ್ತು ಸೌದಿ ಅರೇಬಿಯಾ ಸೇರಿದಂತೆ ಆರು ಗಲ್ಫ್ ದೇಶಗಳಿಗೆ ಭೇಟಿ ನೀಡಬಹುದು. ಕತಾರ್, ಒಮಾನ್, ಕುವೈತ್ ಮತ್ತು ಬಹ್ರೇನ್ ಏಕೀಕೃತ ವೀಸಾ ಯೋಜನೆಯಡಿ ಬರುವ ಇತರ ದೇಶಗಳಾಗಿವೆ. ಪ್ರಯಾಣ ವೆಚ್ಚ ಕಡಿಮೆಯಾಗುವುದರಿಂದ ಪ್ರವಾಸಿಗರಿಗೂ ಅನುಕೂಲವಾಗಿದೆ. ದೇಶಗಳ ಪ್ರವಾಸೋದ್ಯಮ ಆದಾಯವೂ ಹೆಚ್ಚಾಗಲಿದೆ.