janadhvani

Kannada Online News Paper

ಮುಸ್ಲಿಂ ಮುಖಂಡರಿಂದ ದೇವೇಗೌಡರ ಭೇಟಿ

ಬೆಂಗಳೂರು : (ಜನಧ್ವನಿ ವಾರ್ತೆ) ರಾಜ್ಯದ ಮುಸ್ಲಿಂ ಮುಖಂಡರನ್ನೊಳಗೊಂಡ ನಿಯೋಗವೊಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಭೇಟಿಯಾಗಿ ವಿವಿಧ ವಿಚಾರಗಳನ್ನು ಚರ್ಚಿಸಿತು. ಮುಸ್ಲಿಂ ಸಮುದಾಯದ ಪ್ರಸಕ್ತ ಸ್ಥಿತಿಗಳನ್ನು ದೇವೆಗೌಡರ ಗಮನಕ್ಕೆ ತಂದ ನಿಯೋಗವು; ಮುಸ್ಲಿಂ ಸಮುದಾಯ ಶೈಕ್ಷಣಿಕ-ಆರ್ಥಿಕ ಪ್ರಗತಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕೆಂದು ಅಗ್ರಹಿಸಿತು. ಸಾಚಾರ್ ವರದಿಯಲ್ಲಿ ಮಾಡಿರುವ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕು, ಸಂವಿಧಾನಬದ್ಧವಾಗಿ ಮುಸ್ಲಿಮರಿಗೆ ಸಿಗಬೇಕಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಸಿಗುವಂತೆ ಮಾಡಿ, ಮುಸ್ಲಿಂ ಸಮುದಾಯದ ಬಹು ಕಾಲದ ಬೇಡಿಕೆಯಾದ ಮುಸ್ಲಿಂ ಯುನಿವರ್ಸಿಟಿಯನ್ನು ಸ್ಥಾಪಿಸಬೇಕು ಎಂದು ಮನವಿ ಸಲ್ಲಿಸಿತು.
ಇದೇ ಸಂದರ್ಭದಲ್ಲಿ ಮುಸ್ಲಿಂ ಸಮುದಾಯಕ್ಕೆ ತಾನು ಪ್ರಧಾನಿಯಾಗಿರುವಾಗಲೂ ,ಮುಖ್ಯಮಂತ್ರಿಯಾಗಿರುವಾಗಲೂ ಹಲವು ಸವಲತ್ತುಗಳನ್ನು ಒದಗಿಸಿಕೊಟ್ಟಿದ್ದರೂ ಈ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ತಮ್ಮ ಪಕ್ಷವನ್ನು ಕೈ ಹಿಡಿಯಲಿಲ್ಲ ಎಂದು ದೇವೇಗೌಡರು ಅಭಿಪ್ರಾಯಿಸಿದರು. ಸಿದ್ಧರಾಮಯ್ಯ ಸರ್ಕಾರ ಕಳೆದ ಐದು ವರ್ಷಗಳಿಂದ ಮುಸ್ಲಿಂ ಸಮುದಾಯಕ್ಕೆ ಜಾರಿಗೊಳಿಸಿದ ಜನಪರ ಯೋಜನೆಗಳು , ಕಳೆದ ಬಾರಿ ಕುಮಾರಸ್ವಾಮಿಯವರು ಕೋಮುವಾದಿ ಬಿಜೆಪಿ ಯೊಂದಿಗೆ ಕೈ ಜೋಡಿಸಿದ ಕಹಿ‌ ನೆನಪು ಮುಸ್ಲಿಮರು ಮರೆಯದಿರುವುದನ್ನು ಮುಸ್ಲಿಂ ಮುಖಂಡರು ದೇವೇಗೌಡರ ಗಮನಕ್ಕೆ ತಂದರು.

ಜಾತ್ಯಾತೀತ ಸರ್ಕಾರ ಬರುವುದರೊಂದಿಗೆ ಮುಸ್ಲಿಂ ಸಮುದಾಯದೊಡನೆ ಮನೆ ಮಾಡಿದ ಆತಂಕ ದೂರವಾಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಈ ಮೈತ್ರಿ ದಿಕ್ಸೂಚಿಯಾಗಬೇಕೆಂದು ನಿಯೋಗವು ಆಗ್ರಹಿಸಿತು.
_”ನಮ್ಮ ಉದ್ದೇಶಗಳು ಕೇವಲ ವಿಧಾನಸಭಾ ಚುನಾವಣೆಯಾಗಿರಬಾರದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರಂಥವರ ನೇತೃತ್ವದಲ್ಲಿ ತೃತೀಯ ರಂಗವನ್ನು ಒಂದುಗೂಡಿಸಿ ಕೋಮುವಾದಿಗಳನ್ನು ಎದುರಿಸಬೇಕಾಗಿದೆ”_ ಎಂದು ಶಾಫಿ ಸ ಅದಿಯವರು ಕಳೆದ ವರ್ಷ ಸಮಾರಂಭವೊಂದರ ಭಾಷಣದಲ್ಲಿ ಹೇಳಿದ್ದನ್ನು ಸ್ಮರಿಸಿದ ದೇವೇಗೌಡರು; ಇಂತಹ ದೂರದೃಷ್ಟಿಯುಳ್ಳ ಧಾರ್ಮಿಕ ನಾಯಕರ ಅಗತ್ಯತೆ ಈ ಸಮಾಜಕ್ಕೆ ಇದೆ ಎಂದು ಹೇಳಿದರು.

 

ಸುದೀರ್ಘವಾದ ಮುಕ್ಕೂಲು ಘಂಟೆಗಳ ಸಮಾಲೋಚನೆಯಲ್ಲಿ ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಗಳಿರುವ ಪ್ರತಿಯೊಂದು ಕಡೆಗಳಲ್ಲೂ ಶೈಕ್ಷಣಿಕ ಕೇಂದ್ರಗಳನ್ನು ಸ್ಥಾಪಿಸಬೇಕು. ಮುಂಬರುವ ಬಜೆಟ್ ನಲ್ಲಿ ಐದು ಸಾವಿರ ಕೋಟಿ ರೂ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಮೀಸಲಿರಿಸಬೇಕು. ಮುಸ್ಲಿಂ ಸಮುದಾಯದ ಜನಸಂಖ್ಯೆಗನುಸಾರವಾಗಿ ರಾಜಕೀಯ ಪ್ರಾತಿನಿಧ್ಯವನ್ನು ನೀಡುವ ಪ್ರಯತ್ನ ನಡೆಸಬೇಕು. ರಾಜ್ಯದ ಹಲವು ಕಡೆ ಪ್ರಮುಖವಾಗಿ ಕರಾವಳಿ ಪ್ರದೇಶದಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕಬೇಕೆಂದು ಆಗ್ರಹಿಸಿದ ಮುಸ್ಲಿಂ ಮುಖಂಡರು; ತಮ್ಮ ಪಕ್ಷ ಎಷ್ಟು ಸಮಯ ಅಧಿಕಾರದಲ್ಲಿರುವುದು ಮುಖ್ಯವಲ್ಲ, ಅಧಿಕಾರದಲ್ಲಿರುವಷ್ಟು ದಿನ ರಾಜ್ಯದ ಶಾಂತಿ, ಸೌಹಾರ್ದತೆಗೆ ಬೇಕಾಗಿ ಪರಿಶ್ರಮಿಸುವುದು ಮುಖ್ಯ ಎಂದು ಮನದಟ್ಟು ಮಾಡಿಕೊಡಲಾಯಿತು. ನಿಯೋಗದಲ್ಲಿ
ಮೌಲಾನ ಎನ್ .ಕೆ.ಎಂ ಶಾಪಿ ಸ ಅದಿ, ಪತ್ರಕರ್ತ ಬಿ.ಎಂ ಹನೀಫ್ , ಕರ್ನಾಟಕ ಮುತ್ತಹಿದೇ ಮಾಝ್ ನಾಯಕರು ಹಾಗೂ ಅನೇಕ ಮುಸ್ಲಿಂ ನಾಯಕರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com