ಮೈಸೂರು: ‘ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಿ ರೈತರ ಸಾಲಮನ್ನಾ ಮಾಡುತ್ತೇನೆ. ಆರ್ಥಿಕ ತಜ್ಞರು ಏನೇ ಹೇಳಲಿ, ಯಾರು ಬೇಕಾದರೂ ಟೀಕೆ ಮಾಡಲಿ ರಾಜ್ಯದ ಆರ್ಥಿಕ ಸ್ಥಿತಿಗತಿ ಏರುಪೇರು ಆಗದಂತೆ ಕಾರ್ಯಕ್ರಮಗಳನ್ನು ರೂಪಿಸುತ್ತೇನೆ’ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಭರವಸೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯನವರ ಪಾತ್ರದ ಬಗ್ಗೆ ಇನ್ನೆರಡು ದಿನಗಳಲ್ಲಿ ಮಾಹಿತಿ ನೀಡುತ್ತೇನೆ. ಎಂದು ಹೇಳಿದರು.
‘ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು. ಎಲ್ಲರ ನೋವಿಗೆ ಸ್ಪಂದಿಸಲು ನಾನಿದ್ದೇನೆ. ನಾನು ನಿಮ್ಮ ಮಗ, ನಿಮ್ಮ ಮನೆಯ ಸೇವಕ. ನನ್ನ ಮೇಲೆ ವಿಶ್ವಾಸವಿಡಿ. ಏನಾದರೂ ಸಮಸ್ಯೆ ಇದ್ದರೆ, ಯಾರಿಂದಲಾದರೂ ತೊಂದರೆ ಆಗುತ್ತಿದ್ದರೆ ಸಾಮಾನ್ಯ ಪ್ರಜೆ ಕೂಡ ನನ್ನನ್ನು ಭೇಟಿಯಾಗಬಹುದು’ ಎಂದರು.
‘ಯಾರೂ ಯಾವುದೇ ಆತಂಕಕ್ಕೆ ಒಳಗಾಗಬೇಡಿ. ಜಾತಿ ವ್ಯಾಮೋಹ ಬಿಡಿ. ನಾನು ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಆರೂವರೆ ಕೋಟಿ ಜನರಿಗೆ ರಕ್ಷಣೆ ಕೊಡುವುದು ನನ್ನ ಕರ್ತವ್ಯ. ಈ ಮೈತ್ರಿಯಲ್ಲಿ ನನ್ನದೇ ಆದ ಇತಿಮಿತಿಗಳಿವೆ. ಕಾಂಗ್ರೆಸ್ ಮುಖಂಡರ ಜತೆಗೂ ಚರ್ಚೆ ಮಾಡಬೇಕು. ಆದರೆ, ನನ್ನ ಕಲ್ಪನೆ, ಚಿಂತನೆ, ಭಾವನೆಗಳೊಂದಿಗೆ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ನುಡಿದರು.