ಉಡುಪಿ: ನೇಜಾರುವಿನಲ್ಲಿ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ನರಹಂತಕ ಪ್ರವೀಣ್ ಅರುಣ್ ಚೌಗುಲೆ (39)ಯನ್ನು ಉಡುಪಿ ಪೊಲೀಸರು ಇಂದು ಉಡುಪಿ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.ನ್ಯಾಯಾಲಯ ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.
ಬಂಧಿತ ಆರೋಪಿ ಪ್ರವೀಣ್ ನನ್ನು ನ.15ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು, ಗಂಭೀರ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ 14 ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆದುಕೊಂಡಿದ್ದರು. ಈ ವೇಳೆ ಆರೋಪಿಯನ್ನು ನ.28ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಪ್ರವೀಣ್ ನನ್ನು ಕಸ್ಟಡಿಗೆ ಪಡೆದಿದ್ದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿ ಸ್ಥಳ ತನಿಖೆ, ಮಹಜರು ಹೇಳಿಕೆ, ಆರೋಪಿ ಗುರುತು ಸೇರಿದಂತೆ ಎಲ್ಲ ರೀತಿಯ ತನಿಖೆ ಪ್ರಕ್ರಿಯೆಯನ್ನು ವಾರದೊಳಗೆ ಪೂರ್ಣಗೊಳಿಸಿದ್ದಾರೆ.
ಇದೀಗ ಆರೋಪಿಯನ್ನು ನ.28ರವರೆಗೆ ಕಸ್ಟಡಿಯಲ್ಲಿ ಇಟ್ಟುಕೊಳ್ಳುವ ಅಗತ್ಯ ಇಲ್ಲ ಎಂಬುದನ್ನು ಮನಗಂಡ ಪೊಲೀಸರು ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಳಿಕ ಆರೋಪಿಯನ್ನು ಪ್ರಕರಣದ ತನಿಖಾಧಿಕಾರಿ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಉಡುಪಿ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು.
ನ್ಯಾಯಾಧೀಶೆ ದೀಪಾ ಅವರು ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು. ಡಿ.5ರಂದು ಮತ್ತೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಆದೇಶಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಂ.ನದಾಫ್ ಹಾಜರಿದ್ದರು.ಬಳಿಕ ಆರೋಪಿಯನ್ನು ಬಿಗಿ ಭದ್ರತೆಯಲ್ಲಿ ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕೊಂಡೊಯ್ಯಲಾಯಿತು.
ಸ್ನ್ಯಾಪ್ ಚಾಟ್ ಲೊಕೇಶನ್’ನಿಂದ ಅಯ್ನಾಝ್ ಮನೆ ಪತ್ತೆ ಮಾಡಿದ ಹಂತಕ
ತಾಯಿ ಮತ್ತು ಮೂವರು ಮಕ್ಕಳ ಹತ್ಯೆ
ಪ್ರಕರಣದಲ್ಲಿ ಹೊಸ ಹೊಸ ಸಾಕ್ಷ್ಯಾಧಾರಗಳನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದು ಆತ ಈ ಮುಂಚೆ ಆಕೆಯ ಮನೆಗೆ ಬರ್ತ್ಡೆ ಪಾರ್ಟಿಗೆ ಬಂದಿದ್ದ ಎಂಬುವುದು ಊಹಾಪೋಹಾ ಎಂಬುವುದು ಸಾಬೀತಾಗಿದೆ.
ಸ್ನ್ಯಾಪ್ ಚಾಟ್ ಲೊಕೇಶನ್’ನಿಂದ ಅಯ್ನಾಝ್ ಮನೆ ಪತ್ತೆ ಮಾಡಿರುವ ಕುರಿತು ತಿಳಿದು ಬಂದಿದೆ. ಸ್ನ್ಯಾಪ್ ಚಾಟ್ ಲೊಕೇಷನ್ ನೋಡಿ ರಿಕ್ಷಾ ಚಾಲಕನಿಗೆ ಮುಂದೆ ಸಾಗುವಾಗ ನಿಲ್ಲಿಸಿ ನಿರ್ದಿಷ್ಟವಾಗಿ ಮನೆ ತೋರಿಸಿದ್ದಾನೆ.ಪ್ರವೀಣ್ ಇದೇ ಮೊದಲ ಬಾರಿಗೆ ನೇಜಾರಿಗೆ ಬಂದು ಈ ಕೃತ್ಯ ಎಸಗಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೃತ್ಯಕ್ಕೆ ಒಂದು ವಾರ ಮೊದಲು ಐನಾಝ್ ಮನೆಯಲ್ಲಿ ನಡೆದ ಹುಟ್ಟುಹಬ್ಬ ಆಚರಣೆಯಲ್ಲಿ ಆತ ಆಕೆಗೆ ಉಂಗುರ ತೊಡಿಸಿದ್ದ ಎಂಬುದೆಲ್ಲ ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.
ಸ್ನ್ಯಾಪ್ ಚಾಟ್ ಮೆಸೇಜಿಂಗ್ ಆಪ್ಲಿಕೇಷನ್ ಆಗಿದ್ದು ಲೊಕೇಶನ್ ಒನ್ ಇಟ್ಟರೆ ತಾವಿರುವ ನಿರ್ದಿಷ್ಟ ಸ್ಥಳವನ್ನು ತನ್ನ ಸ್ನೇಹಿತರಿಗೆ ತೋರಿಸುತ್ತದೆ.
ಆಕೆ ಮನೆಗೆ ಬರುವ ಸಮಯ ನಂತರ ರವಿವಾರ ರಾತ್ರಿ 8 ಗಂಟೆಗೆ ದುಬೈಗೆ ಹೋಗಲು ಇರುವ ಸಮಯ ಎಲ್ಲವನ್ನು ಅರಿತಿದ್ದ ಹಂತಕ, ಆಕೆ ಮನೆಗೆ ಬಂದಂತಹ ಸಂದರ್ಭದಲ್ಲಿ ಈ ಹತ್ಯಾಕಾಂಡ ನಡೆಸಿದ್ದಾನೆ.
ಮಂಗಳೂರಿನ ಬಿಜೈನಲ್ಲಿರುವ ಮೃತ ಯುವತಿ ಐಯ್ನಾಝ್ ಬಾಡಿಗೆ ರೂಂ ಬಳಿ ಪಾರ್ಕ್ ಮಾಡಿದ್ದ ಚೌಗಲೆ ಹೆಸರಿನಲ್ಲಿರುವ ಸ್ಕೂಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು,ತನಿಖೆ ಮುಂದುವರಿಸಿದ್ದಾರೆ.