janadhvani

Kannada Online News Paper

ಉಡುಪಿ: ಒಂದೇ ಕುಟುಂಬದ ನಾಲ್ವರ ಹತ್ಯೆ- ಕಾರಣವೇನು ಗೊತ್ತೇ..?

ಕೊಲೆಗೆ ಮೂರು ಉದ್ದೇಶ ವಿಚಾರಣೆಯಲ್ಲಿ ತಿಳಿದು ಬಂದಿದ್ದು ಮತ್ತೊಮ್ಮೆ ಸಂತ್ರಸ್ಥ ಕುಟುಂಬದೊಂದಿಗೆ ಪರಿಶೀಲಿಸಿ ತಿಳಿಸುತ್ತೇವೆ ಎಂದರು.

ಉಡುಪಿ: ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ತಾಯಿ, ಮಕ್ಕಳ ಕಗ್ಗೋಲೆ ಪ್ರಕರಣಕ್ಕೆ ಸಂಬಂಧಿಸಿ ಹಂತಕ ಪ್ರವೀಣ್ ಅರುಣ್ ಚೌಗಲಿ ಎಂಬಾತನನ್ನು ಬಂಧಿಸಲಾಗಿದ್ದು, ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಾಲ್ವರನ್ನು ಹತ್ಯೆಮಾಡಲು ಕೊಲೆಗೀಡಾದ ಐನಾಝ್ ಳೊಂದಿಗಿನ ದ್ವೇಷವೇ ಪ್ರಮುಖ ಕಾರಣ ಎಂದು ಪೋಲೀಸರು ತಿಳಿಸಿದ್ದಾರೆ. ಕೊಲೆಗೆ ಮೂರು ಉದ್ದೇಶವನ್ನು ಹಂತಕ ವಿಚಾರಣೆ ವೇಳೆ ತಿಳಿಸಿದ್ದು, ಈ ಬಗ್ಗೆ ಸಂತ್ರಸ್ಥ ಕುಟುಂಬದೊಂದಿಗೆ ಪರಿಶೀಲಿಸಿ ಮಾಹಿತಿ ನೀಡುತ್ತೇವೆ ಎಂದು ಜಿಲ್ಲಾ ಎಸ್ಪಿ ಡಾ.ಕೆ. ಅರುಣ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಮಂಗಳವಾರ ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದ ಆರೋಪಿ ಪ್ರವೀಣ್ ಅರುಣ್ ಚೌಗಲೆ(39) ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತಾಂತ್ರಿಕ ಹಾಗೂ ಇತರ ಸಾಕ್ಷ್ಯಾಧಾರಗಳಿಂದ ಈತನೆ ಕೊಲೆ ಮಾಡಿರುವುದು ದೃಢಪಟ್ಟಿದೆ. ಕೃತ್ಯಕ್ಕೆ ಬಳಸಿದ ಆಯುಧವನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಾಗಿದೆ ಎಂದರು.

ಮಂಗಳೂರು ಏರ್ ಇಂಡಿಯಾದಲ್ಲಿ ಕ್ಯಾಬಿನ್ ಕ್ರೂ ಮೆಂಬರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಪ್ರವೀಣ್ ಗಗನಸಖಿ ಐನಾಝ್ ಮೇಲಿನ ದ್ವೇಷದಲ್ಲಿ ಈ ಕೊಲೆ ಮಾಡಿದ್ದಾನೆ. ತಡೆಯಲು ಬಂದ ತಾಯಿ ಹಾಗೂ ಇಬ್ಬರು ಮಕ್ಕಳನ್ನು ಕೂಡ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಅವರು ಹೇಳಿದರು.ಇದೊಂದು ಪೂರ್ವನಿಯೋಜಿತವಾಗಿ ಕೃತ್ಯ ಎಂದು ಹೇಳಿದರು. ವಿವಾಹಿತನಾಗಿರುವ ಆರೋಪಿ, ಮಹಾರಾಷ್ಟ್ರ ಸಾಂಗ್ಲಿ ಮೂಲದವನಾಗಿದ್ದು ಹಲವು ವರ್ಷಗಳಿಂದ ಮಂಗಳೂರಿನಲ್ಲಿ ವಾಸ ಮಾಡುತ್ತಿದ್ದಾನೆ ಎಂದು ಎಸ್ಪಿ ತಿಳಿಸಿದರು.

ಐನಾಝ್ ಕೊಲೆಯಾದ ದಿನವೇ ಬೆಳಿಗ್ಗೆ 11 ಗಂಟೆಗೆ ದುಬೈಗೆ ಏರ್‌ಇಂಡಿಯಾ ವಿಮಾನದಲ್ಲಿ ಗಗನ ಸಖಿಯಾಗಿ ಕಾರ್ಯನಿರ್ವಹಿಸಲು ಹೋಗಬೇಕಿತ್ತು. ಆದರೆ ಅಂದೇ ಬೆಳಿಗ್ಗೆ ಯಮರೂಪಿಯಾಗಿ ಬಂದ ಪ್ರವೀಣ್ ಮನೆಯಲ್ಲಿದ್ದ ನಾಲ್ವರನ್ನು ಹತ್ಯೆಗೈದು ಪರಾರಿಯಾಗಿದ್ದ.

ನಾಲ್ವರನ್ನು ಹತ್ಯೆಗೈದು ಬಸ್ ಮೂಲಕ ಮಂಗಳೂರಿಗೆ ಹೋಗಿ ಅಲ್ಲಿಂದ ತನ್ನ ಹೆಕ್ಟರ್ ಕಾರಿನಲ್ಲಿ ಬೆಳಗಾವಿಗೆ ಹೋಗಿ ಪರಿಚಯದ ನೀರಾವರಿ ಇಲಾಖೆಯ ಅಧಿಕಾರಿ ಮನೆಯಲ್ಲಿ ಒಂದು ದಿನ ಅಡಗಿದ್ದ. ಅಲ್ಲಿಂದ ನೇರ ತನ್ನೂರು ಸಾಂಗ್ಲಿಗೆ ಹೋಗಿ ಅವಿತುಕೊಳ್ಳುವ ಪ್ಲಾನ್ ರೂಪಿಸಿದ್ದ ಹಂತಕ,

ಕೊಲೆಯಾದ ತಕ್ಷಣ ಎಲರ್ಟ್ ಆದ ಪೊಲೀಸರು ಐನಾಝ್ ದುಡಿಯುತ್ತಿದ್ದ ಏರ್‌ಪೋರ್ಟ್‌ಗೆ ಭೇಟಿ ನೀಡಿ ಉದ್ಯೋಗಿಗಳ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲಿ ರಜೆ ಹಾಕಿದ್ದ ಪ್ರವೀಣ್ ಮಾಹಿತಿ ಕಲೆ ಹಾಕಿ ಫೋನ್ ಟ್ರಾಕ್ ಮಾಡಿದ್ದರು.

error: Content is protected !! Not allowed copy content from janadhvani.com