ಜಿದ್ದಾ: ಹವಾಮಾನ ಬದಲಾವಣೆಯ ಭಾಗವಾಗಿ ಸೌದಿ ಅರೇಬಿಯಾದ ಹಲವೆಡೆ ತಾಪಮಾನ ಕಡಿಮೆಯಾಗುತ್ತಿದೆ ಎಂದು ವರದಿಯಾಗಿದೆ. ಹವಾಮಾನ ಬದಲಾವಣೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಲಿವೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ.
ಸೌದಿ ಅರೇಬಿಯಾ ಪ್ರಸ್ತುತ ಶರತ್ಕಾಲದಿಂದ ಚಳಿಗಾಲಕ್ಕೆ ಪರಿವರ್ತನೆಗೊಳ್ಳುತ್ತಿದೆ. ದೇಶದ ಹಲವು ಭಾಗಗಳಲ್ಲಿ ತಾಪಮಾನದಲ್ಲಿ ಹಠಾತ್ ಕುಸಿತ ಮತ್ತು ಶೀತದ ಅನುಭವವಾಗುತ್ತಿದೆ. ಹವಾಮಾನದಲ್ಲಿನ ಈ ಹಠಾತ್ ಬದಲಾವಣೆಯು ಅನೇಕ ಜನರಲ್ಲಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಚಳಿಯ ತೀವ್ರತೆಯಿಂದ, ಕೈಕಾಲುಗಳ ಬೆರಳುಗಳು, ಮೂಗು, ಕಿವಿ, ಕೆನ್ನೆ ಮತ್ತು ತುಟಿಗಳಲ್ಲಿ ಚರ್ಮ ರೋಗಗಳ ಅಪಾಯವಿದೆ. ಊತ, ಕೆಂಪು ಅಥವಾ ಗಾಢ ನೀಲಿ ಚರ್ಮ, ಹುಣ್ಣುಗಳು ಮತ್ತು ತುರಿಕೆ ಕೂಡ ಹವಾಮಾನ ಬದಲಾವಣೆಯ ಭಾಗವಾಗಿರಬಹುದು. ದೇಹದ ಉಷ್ಣತೆಯು ಕಡಿಮೆಗೊಳ್ಳುವ ಕಾರಣ, ಸೋಂಕಿನ ಅಪಾಯವು ಹೆಚ್ಚು. ಇಂತಹ ಸಂದರ್ಭಗಳಲ್ಲಿ ಅಗತ್ಯ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.
ಇದೇ ವೇಳೆ ಸೌದಿ ಅರೇಬಿಯಾದಲ್ಲಿ ವ್ಯಾಪಕ ಮಳೆ ಹಾಗೂ ಧೂಳಿನ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ಎಚ್ಚರಿಸಿದೆ. ಮಕ್ಕಾ, ಮದೀನಾ, ರಿಯಾದ್ ಮತ್ತು ಉತ್ತರ ಗಡಿ ಪ್ರದೇಶಗಳಲ್ಲಿ ಗುರುವಾರದವರೆಗೆ ಗುಡುಗು ಮಿಂಚು ಸಹಿತ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಧೂಳಿನ ಬಿರುಗಾಳಿಗಳು ಗಂಟೆಗೆ ಐವತ್ತು ಕಿಲೋಮೀಟರ್ ವೇಗವನ್ನು ತಲುಪಬಹುದು. ದೇಶವು ಚಳಿಗಾಲಕ್ಕೆ ಕಾಲಿಡುವ ಮುನ್ನ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ.