ಸೂರ್ಯ ಉದಯಿಸುವ ದಿನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಿನ ಶುಕ್ರವಾರವಾಗಿದೆ. ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮತ್ತು ಹಗಲು ಸತ್ಕರ್ಮಗಳಿಗೆ ಅತ್ಯಂತ ಮಹತ್ವವೇರಿದ ಪುಣ್ಯ ದಿನಗಳಾಗಿವೆ. ಅದನ್ನು ನಾವು ಒಮ್ಮೆಯೂ ವ್ಯರ್ಥ ಮಾಡಲೇ ಬಾರದು ಎಂದು ಕೆಸಿಎಫ್ ಗುದೈಬಿಯಾ ಸೆಕ್ಟರ್ ಅಧ್ಯಕ್ಷರಾದ ಟಿ.ಎಂ. ಉಸ್ತಾದರು ಒತ್ತಿ ಹೇಳಿದರು.
ಅವರು ಕೆಸಿಎಫ್ ಮುಹರ್ರಕ್ ಸೆಕ್ಟರಿನ ಅರಾದ್ ಜಾಮಿಯಾ ಮಸೀದಿಯ ಮಜ್ಲಿಸಿನಲ್ಲಿ ನಡೆದ ಮುಹ್ಯುದ್ದೀನ್ ಮಾಲ ಆಲಾಪನೆ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸಿನ ನೇತೃತ್ವವನ್ನು ವಹಿಸಿ ಮಾತನಾಡಿದರು.
ಶುಕ್ರವಾರ ಕೆಲಸಕ್ಕೆ ರಜೆ ಇದ್ದು ನಿದ್ದೆ ಮಾಡುವ ದಿನವೆಂದು ಕೆಲವರು ಭಾವಿಸಿದ್ದಾರೆ. ಹಾಗಲ್ಲ, ಆ ದಿನ ಬಹಳಷ್ಟು ಸತ್ಕರ್ಮಗಳನ್ನು ನಿರ್ವಹಿಸಲು ನಾವು ಸನ್ನದ್ಧರಾಗಬೇಕು. ಉಗುರು ಕತ್ತರಿಸುವುದು, ಗಡ್ಡ, ಕೂದಲುಗಳನ್ನು ಸರಿ ಪಡಿಸುವುದು, ಸ್ನಾನ ಮಾಡುವಾಗ ಜುಮಾದ ಸುನ್ನತ್ತನ್ನು ಸಂಕಲ್ಪಿಸುವುದು, ಬಿಳಿ ವಸ್ತ್ರ ಧರಿಸುವುದು, ಸುಗಂಧ ಹಚ್ಚುವುದು, ಬೇಗನೆ ಮಸೀದಿಗೆ ಹೋಗುವುದು, ಸೂರಾ ಅಲ್ ಕಹ್ಫ್ ಪಾರಾಯಣ ಮಾಡುವುದು, ಧಾರಾಳ ಸ್ವಲಾತ್ ಹೇಳುವುದು, ಖುತ್ಬಾವನ್ನು ಶ್ರದ್ಧೆಯಿಂದ ಆಲಿಸುವುದು, ನಮಾಜಿನಿಂದ ವಿರಮಿಸಿದ ತಕ್ಷಣ ಎದ್ದು ಹೋಗದೆ ದಿಕ್ರ್ ದುಆಗಳನ್ನು ನಿರ್ವಹಿಸುವುದು ಮುಂತಾದ ಸತ್ಕರ್ಮಗಳನ್ನು ಮಾಡಲು ಈ ಪುಣ್ಯ ದಿನಗಳಲ್ಲಿ ತಾವೆಲ್ಲರೂ ಪ್ರಯತ್ನಿಸಬೇಕೆಂದು ಕೆಸಿಎಫ್ ನ ಕಾರ್ಯಕರ್ತರಿಗೆ ಅವರು ಬೋಧನೆ ನೀಡಿದರು.
ಕೊನೆಯಲ್ಲಿ ಪ್ಯಾಲೆಸ್ತೀನ್ ಜನತೆಯ ರಕ್ಷಣೆಗಾಗಿ ಭಕ್ತಿನಿರ್ಭರವಾಗಿ ದುಆ ನೆರವೇರಿಸಿದರು.
ಅಹ್ಮದ್ ಸಖಾಫಿ, ಇಸ್ಮಾಈಲ್ ಸಅದಿ, ಅಬ್ದುಲ್ ಖಾದರ್ ಸಖಾಫಿ, ಸಿದ್ದೀಖ್ ಉಸ್ತಾದ್, ಅಹ್ಮದ್ ಉಸ್ತಾದ್, ಫಕ್ರುದ್ದೀನ್ ಹಾಜಿ ಮುಂತಾದವರು ಉಪಸ್ಥಿತರಿದ್ದರು.
ವರದಿ:
ಎಂ.ಎ. ವೇಣೂರು, ಬಹರೈನ್.