ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ದುಬೈ ಸೌತ್ ಝೋನ್ ವತಿಯಿಂದ ಗ್ರಾಂಡ್ ಮೀಲಾದ್ ಸಮ್ಮೇಳನವು ಅ. 08 ಭಾನುವಾರ ಬರ್ ದುಬೈ ಹಾಲಿಡೇ ಹೋಟೇಲಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಮಾಲಿಯ ವಿಧ್ಯಾ ಸಮುಚ್ಚಯಗಳ ಸಂಸ್ಥಾಪಕ ಸಯ್ಯಿದ್ ಝೈನುದ್ದೀನ್ ಅಲ್ ಬುಖಾರಿ ಮಾತನಾಡಿ “ವಿಶ್ವ ಪ್ರವಾದಿ ಮುಹಮ್ಮದರ ಜನ್ಮ ದಿನಾಚರಣೆಯನ್ನು ವಿಶ್ವದೆಲ್ಲೆಡೆ ಆಚರಿಸುವಾಗ ಅವರ ತತ್ವಾದರ್ಶಗಳು, ಜೀವನ ಪಾಠಗಳು ಹಾಗೂ ಮಾನವೀಯ ಮೌಲ್ಯಗಳ ಕುರಿತು ಎಲ್ಲರಿಗೂ ತಿಳಿಸಬೇಕು. ಪ್ರವಾದಿಯವರ ಜೀವನ ಶೈಲಿ ಪ್ರಸ್ತುತ ಜಗತ್ತಿಗೆ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಕೆಸಿಎಫ್ ಸಂಘಟನೆಯು ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ತರಗತಿಗಳ ಮೂಲಕ ಅನಿವಾಸಿ ಕನ್ನಡಿಗರಿಗೆ ಪ್ರವಾದಿಯವರ ಬಗ್ಗೆ ಅರಿವು ಮೂಡಿಸುವಲ್ಲಿ ಅಪೂರ್ವ ಯಶಸ್ವಿ ಸಾಧಿಸಿದೆ” ಎಂದು ಹೇಳಿದರು.
ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಕೆಸಿಎಫ್ ಯುಎಇ ಅಧ್ಯಕ್ಷ ಇಬ್ರಾಹಿಂ ಸಖಾಫಿ “ಕರ್ನಾಟಕ ರಾಜ್ಯ ವಿವಿಧ ಶಿಕ್ಷಣ ಸಂಸ್ಥೆಗಳ ಉನ್ನತಿಗಾಗಿ ಕೆಸಿಎಫ್ ಶ್ರಮಿಸುತ್ತಿದ್ದು, ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಅವುಗಳ ಬೆಳವಣಿಗೆಗೆ ಕೆಸಿಎಫ್ ಸದಾ ಮುಂಚೂಣಿಯಲ್ಲಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಸಯ್ಯಿದ್ ತ್ವಾಹಾ ತಂಙಳ್ ಪೂಕೊಟೂರ್ ಬಳಗದಿಂದ ಅತ್ಯಾಕರ್ಷಕ ಬುರ್ದಾ ಆಲಾಪನೆ ನಡೆಯಿತು. ಮುಹಮ್ಮದ್ ಅಲಿ ಕನ್ಯಾನ ರಚಿತ, ಕೆಸಿಎಫ್ ದುಬೈ ಸೌತ್ ಝೋನ್ ಪ್ರಕಾಶಿತ, ಮಲಯಾಳಂ ಗಾಯಕ ಶಾಹಿನ್ ಬಾಬು ತಾನೂರು ಹಾಡಿದ ಕೆಸಿಎಫ್ ಸೇವೆಗಳ ಕುರಿತಾದ ಕನ್ನಡ ಹಾಡನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಸಿಎಫ್ ಯುಎಇ ನಾಯಕರಾದ ಮೂಸಾ ಹಾಜಿ ಬಸರ, ಝೈನುದ್ದೀನ್ ಹಾಜಿ ಬೆಳ್ಳಾರೆ, ಸ್ವಾಗತ ಸಮಿತಿ ಅಧ್ಯಕ್ಷ ಇಕ್ಬಾಲ್ ಸಿದ್ದಕಟ್ಟೆ, ಕೆಸಿಎಫ್ ದುಬೈ ಸೌತ್ ಝೋನ್ ಅಧ್ಯಕ್ಷ ಇಲ್ಯಾಸ್ ಮದನಿ ಬರ್ಶ, ಕೋಶಾಧಿಕಾರಿ ರಝಕ್ ಹಾಜಿ, ನಝೀರ್ ಹಾಜಿ ಕೆಮ್ಮಾರ ಸೇರಿದಂತೆ ಕೆಸಿಎಫ್ ಯುಎಇಯ ವಿವಿಧ ಝೋನ್‌ಗಳ ನಾಯಕರು ಹಾಗೂ ಪದಾಧಿಕಾರಿಗಳು ಬಾಗವಹಿಸಿದ್ದರು.