janadhvani

Kannada Online News Paper

ಫೆಲೆಸ್ತೀನ್ ಹೋರಾಟಗಾರರಿಗೆ ಕಾಂಗ್ರೆಸ್ ಬೆಂಬಲ- ತಕ್ಷಣದ ಕದನ ವಿರಾಮಕ್ಕೆ ಕರೆ

ಫೆಲೆಸ್ತೀನ್ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಮಾತುಕತೆಯ ಮೂಲಕ ಪೂರೈಸಬೇಕು ಎಂದು ತಮ್ಮಪಕ್ಷವು ಯಾವಾಗಲೂ ನಂಬುತ್ತದೆ

ಹೊಸದಿಲ್ಲಿ: ನವದೆಹಲಿ: ಜಾತಿ ಗಣತಿ, ಪಂಚ ರಾಜ್ಯಗಳ ಚುನಾವಣೆ ಮತ್ತು ತನಿಖಾ ಸಂಸ್ಥೆಗಳಿಂದ ವಿರೋಧ ಪಕ್ಷದ ರಾಜಕಾರಣಿಗಳನ್ನು ಗುರಿಯಾಗಿಸುವುದು ಸೇರಿದಂತೆ ದೇಶದಲ್ಲಿನ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಲು ಇಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು (CWC) ಸಭೆ ನಡೆಸಿದೆ.

ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷವು ಇಸ್ರೇಲ್ – ಹಮಾಸ್ ಹೋರಾಟಗಾರರ ನಡುವೆ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿತು ಎಂದು ದೇಶೀಯ ಮಾಧ್ಯಮಗಳು ವರದಿ ಮಾಡಿದೆ.

ಕಾಂಗ್ರೆಸ್ ಪಕ್ಷವು “ಫೆಲೆಸ್ತೀನ್ ಜನರ ಭೂಮಿ, ಸ್ವ- ಸರ್ಕಾರ, ಘನತೆ ಮತ್ತು ಗೌರವದಿಂದ ಬದುಕುವ ಹಕ್ಕುಗಳಿಗಾಗಿ ತನ್ನ ಬೆಂಬಲವನ್ನು ಸೂಚಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಪಕ್ಷವು ” ಪ್ರಸ್ತುತ ಸಂಘರ್ಷಕ್ಕೆ ಕಾರಣವಾದ ಸಮಸ್ಯೆಗಳು ಸೇರಿದಂತೆ ಎಲ್ಲಾ ಬಾಕಿ ಉಳಿದಿರುವ ವಿಷಯಗಳ ಬಗ್ಗೆ ಮಾತುಕತೆಗಳನ್ನು ಪ್ರಾರಂಭಿಬೇಕು’ ಎಂದು ತಿಳಿಸಿದೆ.

ಈ ಕುರಿತು ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಫೆಲೆಸ್ತೀನ್ ಜನರ ಕಾನೂನುಬದ್ಧ ಆಕಾಂಕ್ಷೆಗಳನ್ನು ಮಾತುಕತೆಯ ಮೂಲಕ ಪೂರೈಸಬೇಕು ಎಂದು ತಮ್ಮಪಕ್ಷವು ಯಾವಾಗಲೂ ನಂಬುತ್ತದೆ ಎಂದು ಹೇಳಿದ್ದಾರೆ.ಇಸ್ರೇಲ್ ಮತ್ತು ಹಮಾಸ್ ಹೋರಾಟಗಾರರ ಗುಂಪಿನ ನಡುವಿನ ಸಂಘರ್ಷ ಸೋಮವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಭಾಗಗಿಯಾಗಿದ್ದಾರೆ. ಸಭೆಯಲ್ಲಿ ಮಧ್ಯ ಪ್ರದೇಶ, ತೆಲಂಗಾಣ, ರಾಜಸ್ಥಾನ, ಛತ್ತೀಸಗಢ ಹಾಗೂ ಮಿಜೋರಾಂ ವಿಧಾನಸಭೆ ಚುನಾವಣೆ ಸಂಬಂಧ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.

ಈಗಾಗಲೇ 5 ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈ ಸಂಬಂಧ ಮುಂದಿನ ಕಾರ್ಯತಂತ್ರಗಳ ಕುರಿತಂತೆ ನಾಯಕರು ಚರ್ಚೆ ನಡೆಸಿದ್ದಾರೆ.

ಸಭೆ ಕುರಿತು ಎಕ್ಸ್ (ಟ್ವೀಟ್) ಮಾಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ‘ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಐಎನ್‌ಸಿ ಅಧ್ಯಕ್ಷ ಖರ್ಗೆ ಅವರ ನೇತೃತ್ವದಲ್ಲಿ ಸಭೆಯನ್ನು ಪ್ರಾರಂಭಿಸಿತು. ಮುಂಬರುವ ಚುನಾವಣೆಗಳಿಗೆ ನಾವು ಸಂಪೂರ್ಣವಾಗಿ ಸಜ್ಜಾಗಿದ್ದೇವೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿನಾಶಕಾರಿ ಅಜೆಂಡಾವನ್ನು ಬಹಿರಂಗಪಡಿಸಲು ಸಮರ್ಪಿತರಾಗಿದ್ದೇವೆ.

ನಮ್ಮ ರಾಜ್ಯ ಸರ್ಕಾರಗಳು ಕಾಂಗ್ರೆಸ್ ಆಡಳಿತದ ಮಾದರಿಯ ಉದಾಹರಣೆಯನ್ನು ನೀಡಿವೆ, ಇದು 1.4 ಶತಕೋಟಿ ಭಾರತೀಯರಲ್ಲಿ ವಿಶ್ವಾಸವನ್ನು ಪ್ರೇರೇಪಿಸಿದೆ, ಕಾಂಗ್ರೆಸ್ ದೇಶವನ್ನು ಪರಿವರ್ತಿಸುವ ಸುಸಜ್ಜಿತ ದೀರ್ಘಾವಧಿಯ ದೃಷ್ಟಿಯನ್ನು ಹೊಂದಿದೆ ಎಂದಿದ್ದಾರೆ.

error: Content is protected !! Not allowed copy content from janadhvani.com