janadhvani

Kannada Online News Paper

ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭ- ಎಲ್ಲರ ಚಿತ್ತ ರಾಜ್ಯ ರಾಜಧಾನಿಯತ್ತ

ಸೆ.10 ರಂದು ಬೆಳಿಗ್ಗೆ 10ಕ್ಕೆ ಎಸ್‌ಎಸ್‌ಎಫ್‌ ಪ್ರತಿನಿಧಿ ಸಮಾವೇಶ ನಡೆಯಲಿದ್ದು, ರಾಜ್ಯದ 7 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ

ಬೆಂಗಳೂರು: ಸುನ್ನೀ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಐವತ್ತನೇ ವರ್ಷಾಚರಣೆಯ ಪ್ರಯುಕ್ತ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನ ಹಾಗೂ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯು ನಡೆಸುತ್ತಿರುವ ಕಾಶ್ಮೀರದಿಂದ ಆರಂಭಗೊಂಡಿರುವ ಸಂವಿಧಾನ ಯಾತ್ರೆಯ ಸಮಾರೋಪ ಸಮಾರಂಭ ಸೆಪ್ಟೆಂಬರ್ 10 ರವಿವಾರದಂದು ಬೆಂಗಳೂರು ಮಹಾನಗರದ ಶ್ರೀ ಕೃಷ್ಣ ವಿಹಾರ ಅರಮನೆ ಮೈದಾನದಲ್ಲಿ ನಡೆಯಲಿದೆ.

ಸೆ.10 ರಂದು ಬೆಳಿಗ್ಗೆ 10ಕ್ಕೆ ಎಸ್‌ಎಸ್‌ಎಫ್‌ ಪ್ರತಿನಿಧಿ ಸಮಾವೇಶ ನಡೆಯಲಿದ್ದು, ರಾಜ್ಯದ 7 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಎಸ್‌ಎಫ್‌ ರಾಜ್ಯ ಘಟಕದ ಅಧ್ಯಕ್ಷರಾದ ಸುಫ್ಯಾನ್ ಸಖಾಫಿ ತಿಳಿಸಿದ್ದಾರೆ.ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಕರ್ನಾಟಕದ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲುಮಾ ಮಾಣಿ ಉಸ್ತಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ.

1947-ಏಪ್ರಿಲ್ 29 ರಂದು ಕೇರಳದಲ್ಲಿ ಸ್ಥಾಪಿತಗೊಂಡ ಎಸ್ಸೆಸ್ಸೆಫ್, ದೇಶಾದ್ಯಂತವಿರುವ 30 ರಾಜ್ಯಗಳಲ್ಲೂ ಯುನಿಟ್, ಸೆಕ್ಟರ್,ಡಿವಿಶನ್, ಜಿಲ್ಲೆ ಮತ್ತು ರಾಜ್ಯ ಘಟಕಗಳ ಮೂಲಕ ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿದೆ.

ಮುಸ್ಲಿಂ ಸಮಾಜದಲ್ಲಿ ಬಹುಮುಖ ಪ್ರತಿಭೆಗಳನ್ನು ಬೆಳೆಸಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆ ಸಂಸ್ಕೃತಿಯನ್ನು ರೂಪಿಸುವಲ್ಲಿ ಎಸ್ಸೆಸ್ಸೆಫ್ ಗಮನಾರ್ಹ ಪಾತ್ರ ವಹಿಸಿದೆ. ಸಮುದಾಯ, ಸಮಾಜ ಮತ್ತು ದೇಶದ ಹಿತದೃಷ್ಟಿಯಿಂದ ಎಸ್ಸೆಸ್ಸೆಫ್ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ.

ಕಳೆದ ಐದು ದಶಕಗಳಿಂದ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಗುಣನಡೆತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ಸಂಘಟನೆಯು, ದೇಶದ ಸಂವಿಧಾನ ನೀಡಿರುವ ಸವಲತ್ತುಗಳನ್ನು ಬಳಸಿಕೊಂಡು, ಕಾನೂನನ್ನು ಗೌರವಿಸಿಕೊಂಡು ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅಭೂತಪೂರ್ವ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.

ಕಳೆದ ಮೂರುವರೆ ದಶಕಗಳಿಂದ ಕರ್ನಾಟಕದಲ್ಲಿ ಎಸ್ಸೆಸ್ಸೆಫ್ ಕಾರ್ಯಾಚರಿಸುತ್ತಿದ್ದು, ವಿದ್ಯಾರ್ಥಿಗಳನ್ನು ಅಮಲು ಪದಾರ್ಥ ಸೇವನೆ ಮುಂತಾದ ದುಶ್ಚಟಗಳಿಂದ ತಡೆಯುವ ನಿಟ್ಟಿನಲ್ಲಿ ಜಾಗೃತಿಯನ್ನು ಮೂಡಿಸುತ್ತಾ ಬಂದಿದೆ. ಸಮಾಜದಲ್ಲಿ ತಲೆದೋರಿರುವ ವರದಕ್ಷಿಣೆಯಂತಹಾ ಪಿಡುಗಿನ ವಿರುದ್ಧ ಎಸ್ಸೆಸ್ಸೆಫ್ ಶಕ್ತವಾದ ಹೋರಾಟ ನಡೆಸಿದೆ. ಎಳೆಯ ವಯಸ್ಸಿನ ವಿದ್ಯಾರ್ಥಿಗಳನ್ನು ಯಾವುದೇ ದುರಾಭ್ಯಾಸಕ್ಕೆ ಬಲಿಯಾಗದಂತೆ ತಡೆಯುವ ಎಸ್ಸೆಸ್ಸೆಫ್, ವಿದ್ಯಾರ್ಥಿಗಳಿಗೆ ಯಥಾವತ್ತಾಗಿ ಉತ್ತಮ ಮಾರ್ಗದರ್ಶನ ನೀಡುತ್ತಿದೆ.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ಅಲ್ ಬುಖಾರಿ ಕೂರತ್, ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್,ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್, ಗೃಹಮಂತ್ರಿ ಜಿ. ಪರಮೇಶ್ವರ್, ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಬಿ. ಝಡ್. ಝಮೀರ್ ಅಹ್ಮದ್ ಖಾನ್, ಜೆಡಿಎಸ್ ಅಧ್ಯಕ್ಷ – ಸಿ.ಎಂ. ಇಬ್ರಾಹಿಂ, ತಮಿಳುನಾಡು ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಗಿಂಗಿ ಮಸ್ತಾನ್, ಕೇರಳದ ಸಂಸದ ಟಿ.ಎನ್. ಪ್ರತಾಪನ್ ಮುಂತಾದ ರಾಜಕೀಯ ಮುಖಂಡರು ಹಾಗೂ ಉಲಮಾ, ಉಮರಾ ನಾಯಕರು, ಸಾಮಾಜಿಕ ಮತ್ತು ಶೈಕ್ಷಣಿಕ ಧುರೀಣರು ಬಾಗವಹಿಸಲಿದ್ದಾರೆ. ಐತಿಹಾಸಿಕ ಮಹಾ ಸಂಗಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

error: Content is protected !! Not allowed copy content from janadhvani.com