ಲಕ್ನೋ:ಸಹಪಾಠಿಗಳಿಂದ ಮುಸ್ಲಿಂ ವಿದ್ಯಾರ್ಥಿಯ ಕಪಾಳಕ್ಕೆ ಹೊಡೆಸಿದ್ದ ಶಿಕ್ಷಕಿ ಸೇವೆ ಸಲ್ಲಿಸುತ್ತಿರುವ ಶಾಲೆಯನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಲಾಗಿದೆ ಎಂದು ಪ್ರಾಧಿಕಾರಗಳು ತಿಳಿಸಿವೆ. ಈ ಕುರಿತು ಶಿಕ್ಷಣ ಇಲಾಖೆಯು ಶಾಲಾ ನಿರ್ವಾಹಕರಿಗೆ ನೋಟಿಸ್ ರವಾನಿಸಿದೆ ಎಂದು ವರದಿಯಾಗಿದೆ.
ಈ ನಡುವೆ, ಆ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಅವರ ವ್ಯಾಸಂಗಕ್ಕೆ ಅಡ್ಡಿಯಾಗದಂತೆ, ಸಮೀಪದ ಶಾಲೆಗೆ ದಾಖಲಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಿದ್ದಾರೆ ಎಂದೂ ಪ್ರಾಧಿಕಾರಗಳು ಹೇಳಿವೆ.
ಮುಝಾಫರ್ ನಗರದ ನೇಹಾ ಸಾರ್ವಜನಿಕ ಶಾಲೆಯಲ್ಲಿ ಪ್ರಾಂಶುಪಾಲ ಹುದ್ದೆಯನ್ನೂ ನಿರ್ವಹಿಸುತ್ತಿರುವ ಆರೋಪಿ ಶಿಕ್ಷಕಿ ತೃಪ್ತಾ ತ್ಯಾಗಿ, 7 ವರ್ಷದ ಮುಸ್ಲಿಂ ಬಾಲಕನ ಕಪಾಳಕ್ಕೆ ಹೊಡೆಯುವಂತೆ ಸಹಪಾಠಿಗಳಿಗೆ ಸೂಚಿಸಿರುವ ವಿಡಿಯೊ ವೈರಲ್ ಆಗಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ಅದೊಂದು ಕ್ಷುಲ್ಲಕ ವಿಷಯ ಎಂದು ಹೇಳುವ ಮೂಲಕ ಆ ಶಿಕ್ಷಕಿಯು ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ನಡುವೆ, ಘಟನೆಯ ಸಂತ್ರಸ್ತ ಬಾಲಕ ಹಾಗೂ ಆತನ ಪೋಷಕರೊಂದಿಗೆ ಮಕ್ಕಳ ಕಲ್ಯಾಣ ಸಮಿತಿಯು ಆಪ್ತ ಸಮಾಲೋಚನೆ ನಡೆಸಿದೆ. “ನನ್ನ ಪುತ್ರನಿಗೆ 7 ವರ್ಷ ವಯಸ್ಸು. ಈ ಘಟನೆಯು ಆಗಸ್ಟ್ 24ರಂದು ನಡೆದಿದೆ. ಆ ಶಿಕ್ಷಕಿಯು ನನ್ನ ಮಗನಿಗೆ ಆತನ ಸಹಪಾಠಿಗಳು ಪದೇ ಪದೇ ಹೊಡೆಯುವಂತೆ ಮಾಡಿದ್ದಾರೆ. ನನ್ನ ಪುತ್ರನಿಗೆ ಒಂದು ಅಥವಾ ಎರಡು ಗಂಟೆ ಕಾಲ ಕಿರುಕುಳ ನೀಡಲಾಗಿದೆ. ಆತ ಭಯಭೀತನಾಗಿದ್ದಾನೆ” ಎಂದು ಘಟನೆಯ ನಂತರ ಬಾಲಕನ ತಂದೆಯು ಹೇಳಿಕೆ ನೀಡಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಘಟನೆಯ ವಿಡಿಯೊ ಕುರಿತು ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೊಂದು ದ್ವೇಷಾಪರಾಧ ಪ್ರಕರಣವೆಂದು ಎಲ್ಲ ರಾಜಕಾರಣಿಗಳೂ ಪಕ್ಷಾತೀತವಾಗಿ ಖಂಡಿಸಿದ್ದರು.
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಶಿಕ್ಷಕಿ ತ್ರಿಪ್ತಾ ತ್ಯಾಗಿ, ತಾನು ಕೋಮುವಾದಿಯಾಗಿ ಯಾವುದೇ ಹೆಜ್ಜೆ ಇಟ್ಟಿಲ್ಲ. ವಿದ್ಯಾರ್ಥಿ ತನ್ನ ಹೋಮ್ ವರ್ಕ್ ತರದ ಕಾರಣ ನಾನು ಕೆಲವು ವಿದ್ಯಾರ್ಥಿಗಳನ್ನು ಕಪಾಳಮೋಕ್ಷ ಮಾಡಲು ಕೇಳಿದೆ ಎಂದು ಹೇಳಿದ್ದಾರೆ.
ನಾನು ಅಂಗವಿಕಲೆ, ಆದ್ದರಿಂದ ನಾನು ಕೆಲವು ವಿದ್ಯಾರ್ಥಿಗಳನ್ನು ಕಪಾಳಕ್ಕೆ ಹೊಡೆಯುವಂತೆ ಹೇಳಿದೆ. ಇದರಿಂದ ಅವನು ತನ್ನ ಹೋಮ್ ವರ್ಕ್ ಮಾಡಲು ಪ್ರಾರಂಭಿಸುತ್ತಾನೆ ಎಂದುಕೊಂಡಿದೆ. ಆದರೆ ಈ ಘಟನೆಗೆ ಕೋಮು ಬಣ್ಣ ಬಳಿಯಲು ವೀಡಿಯೋವನ್ನು ತಿರುಚಲಾಗಿದೆ.
ಇದು ‘ಸಣ್ಣ ವಿಷಯ’. ವೀಡಿಯೊ ವೈರಲ್ ಆದ ನಂತರ ಇದಕ್ಕೆ ಪ್ರಾಮುಖ್ಯತೆ ಬಂದಿದೆ. ನನಗೆ ಯಾವುದೇ ದುರುದ್ದೇಶ ಇರಲಿಲ್ಲ, ಅವರೆಲ್ಲರೂ ನನ್ನ ಮಕ್ಕಳಂತೆ ಮತ್ತು ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಅದನ್ನು ಅನಗತ್ಯವಾಗಿ ದೊಡ್ಡ ವಿಷಯವಾಗಿ ಮಾಡಲಾಗಿದೆ. ಇದು ಸಣ್ಣ ವಿಚಾರ ಎಂದು ನಾನು ರಾಜಕಾರಣಿಗಳಿಗೆ ಹೇಳಲು ಬಯಸುತ್ತೇನೆ ಎಂದರು.
ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮುಜರಾಯಿ ಜಿಲ್ಲಾಧಿಕಾರಿ ಅರವಿಂದ ಮಲ್ಲಪ್ಪ ಬಂಗಾರಿ ತಿಳಿಸಿದ್ದಾರೆ. ಈ ಹಿಂದೆ ದೂರು ನೀಡಲು ಪೋಷಕರು ಒಪ್ಪದಿದ್ದರೂ ಇಂದು ಬೆಳಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಂಗಾರಿ ತಿಳಿಸಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯಿಂದ ಮಗು ಮತ್ತು ಪೋಷಕರಿಗೆ ಕೌನ್ಸೆಲಿಂಗ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.