ದುಬೈ: ಬೇಸಿಗೆಯ ಬೇಗೆಗೆ ಶಮನ ಎಂಬಂತೆ ಇಂದು ಯುಎಇಯಲ್ಲಿ ಮಳೆಯಾಗಿದೆ. ದುಬೈ ಮತ್ತು ಶಾರ್ಜಾದಲ್ಲಿ ಶನಿವಾರ ಭಾರೀ ಮಳೆಯಾಗಿದೆ. ಯುಎಇಯ ಹಲವು ಭಾಗಗಳಲ್ಲಿ ಕಳೆದ ದಿನ ಬೇಸಿಗೆಯ ತಾಪಕ್ಕೆ ಶಮನವಾಗಿದೆ. ದುಬೈ ಮತ್ತು ಶಾರ್ಜಾದ ಹಲವು ಭಾಗಗಳಲ್ಲಿ ಭಾರೀ ಬಿರುಗಾಳಿ ಸಹ ಅಪ್ಪಳಿಸಿದೆ.
ಅಲ್ ಖುದ್ರಾ ಮತ್ತು ಅಲ್ ಬರ್ಶಾದಲ್ಲಿ ಕ್ರಮವಾಗಿ ಮಧ್ಯಾಹ್ನ 3.53 ಮತ್ತು 3.54 ಕ್ಕೆ ಮಳೆಯಾಗಿದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಮಳೆಯ ಜತೆಗೆ ಆಲಿಕಲ್ಲು ಕೂಡ ಸುರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಟಾರ್ಮ್ ಸೆಂಟರ್ ಹಂಚಿಕೊಂಡಿರುವ ವಿಡಿಯೋದಲ್ಲಿ ದುಬೈನ ಅಲ್ ಮರಮ್ ಪ್ರದೇಶದಲ್ಲಿ ಬಲವಾದ ಗಾಳಿ ಮತ್ತು ಮಳೆಯಾಗಿರುವುದು ಸ್ಪಷ್ಟವಾಗಿದೆ.
ಕಳೆದ ದಿನ ದೇಶದ ವಿವಿಧೆಡೆ ಮಳೆಯಾಗಿದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿತ್ತು. ಶುಕ್ರವಾರ ಸಂಜೆ ಮಳೆ ಸುರಿದ ಹಿನ್ನೆಲೆಯಲ್ಲಿ ಅಲ್ ಐನ್ ರಸ್ತೆಗಳಲ್ಲಿ ಪೊಲೀಸರು ವೇಗದ ಮಿತಿಯನ್ನು ಕಡಿತಗೊಳಿಸಿದ್ದರು. ವೇಗ 120 ಕಿ.ಮೀ ಮೀರಬಾರದು ಎಂದು ಸೂಚಿಸಲಾಗಿದೆ. ಮಲಖಿತ್ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ ಎಂದು ವರದಿಯಾಗಿದೆ.
ಶಾರ್ಜಾದ ರೋಲಾ ಮುಂತಾದಡೆ ಬಿರುಗಾಳಿಯಿಂದಾಗಿ ಅಂಗಡಿಯ ನಾಮಫಲಕ, ಕಟ್ಟಡದ ಮೇಲಿರಿಸಲಾಗಿದ್ದ ಡಿಶ್ ಮುಂತಾದವು ಹಾರಿ ಹೋಗಿರುವ ಬಗ್ಗೆ ವರದಿಯಾಗಿದೆ.