janadhvani

Kannada Online News Paper

ಉಪ ಸಭಾಪತಿ ಮೇಲೆ ಕಾಗದ ಪತ್ರ ಎಸೆತ- ಸದನಕ್ಕೆ ಅಗೌರವ ತೋರಿದ 10 ಬಿಜೆಪಿ ಶಾಸಕರು ಅಮಾನತು

ಪ್ರಸಕ್ತ ಅಧಿವೇಶನದ ಅವಧಿ ಮುಗಿಯುವ ವರೆಗೂ ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ಆದೇಶಿಸಿದ್ದಾರೆ.

ಬೆಂಗಳೂರು: ವಿಧಾನಸಭೆ ಕಲಾಪದ ಸಂದರ್ಭ ಅತಿರೇಕದ ವರ್ತನೆ ತೋರಿದ ಹತ್ತು ಮಂದಿ ಬಿಜೆಪಿ ಶಾಸಕರನ್ನು ಬುಧವಾರ ಅಮಾನತು ಮಾಡಲಾಗಿದೆ. ಪ್ರಸಕ್ತ ಅಧಿವೇಶನದ ಅವಧಿ ಮುಗಿಯುವ ವರೆಗೂ ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಯುಟಿ ಖಾದರ್ ಆದೇಶಿಸಿದ್ದಾರೆ.

ಡಾ. ಅಶ್ವತ್ಥನಾರಾಯಣ, ವೇದವ್ಯಾಸ ಕಾಮತ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ಸುನೀಲ್ ಕುಮಾರ್, ಆರ್. ಅಶೋಕ್, ಉಮಾನಾಥ್ ಕೋಟ್ಯಾನ್, ಅರಗ ಜ್ಞಾನೇಂದ್ರ ಹಾಗೂ ಭರತ್ ಶೆಟ್ಟಿ ಅಮಾನತಾಗಿರುವ ಬಿಜೆಪಿ ಶಾಸಕರಾಗಿದ್ದಾರೆ.

ಗುರುವಾರ ಮತ್ತು ಶುಕ್ರವಾರ 2 ದಿನಗಳ ಕಾಲ ಅಧಿವೇಶನ ಬಾಕಿ ಉಳಿದಿದೆ. ಸದನಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ಅಮಾನತು ಮಾಡಲಾಗಿದೆ ಎಂದು ಖಾದರ್ ತಿಳಿಸಿದ್ದಾರೆ. ನಂತರ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಿಕೆ ಮಾಡಲಾಗಿದೆ.

ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಕೆಲವು ಬಿಲ್‌ಗಳು ಸೇರಿದಂತೆ ದಾಖಲೆಗಳನ್ನು ಹರಿದು ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಮೇಲೆ ಎಸೆದಿದ್ದರು. ಈ ವಿಚಾರವಾಗಿ ಸದನದಲ್ಲಿ ಭಾರಿ ಗದ್ದಲ ಸೃಷ್ಟಿಯಾಗಿತ್ತು. ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ಸ್ಪೀಕರ್ಗೆ ದೂರು ನೀಡಿದ್ದರು. ಸಣ್ಣ ವಿಚಾರಕ್ಕೆ ಬಿಜೆಪಿಯವರು ಧರಣಿ ಮಾಡುತ್ತಾರೆ. ದಲಿತ ಅಧ್ಯಕ್ಷರ ಮೇಲೆ ಪೇಪರ್ ಎಸೆಯುತ್ತಾರೆ, ಹಲ್ಲೆಗೆ ಮುಂದಾಗುತ್ತಾರೆ. ಬಿಜೆಪಿಯವರು ಕ್ಷಮೆ ಕೇಳಬೇಕು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ‌ ಶಿವಲಿಂಗೇಗೌಡ ಆಗ್ರಹಿಸಿದ್ದರು.

ಈ ಸದನದ ಗೌರವ, ಪೀಠದ ಗೌರವ ಉಳಿಸುವುದು ನನ್ನ ಜವಾಬ್ದಾರಿ. ಆದರೆ, ನೀವು(ಬಿಜೆಪಿ ಸದಸ್ಯರು) ಈ ಸದನ ಹಾಗೂ ಪೀಠಕ್ಕೆ ನಿಮ್ಮ ಪ್ರತಿಭಟನೆ, ಅಶಿಸ್ತಿನ ಮೂಲಕ ಅಗೌರವ ತೋರಿಸಿದ್ದೀರಾ. ನಮ್ಮರಾಜ್ಯ ದೇಶದ ಜನ ಇದನ್ನು ನೋಡಿದ್ದಾರೆ. ಈ ಸದನ ಅಷ್ಟೇ ಅಲ್ಲ ಇಡೀ ರಾಜ್ಯದ ಜನತೆಗೆ ತಾವು ಕಪ್ಪು ಚುಕ್ಕೆ ತರುತ್ತಿದ್ದೀರಾ. ನಿಮಗೆ ಮತ ಕೊಟ್ಟಿರುವ ಜನತೆಗೆ ದೊಡ್ಡಮಟ್ಟದ ದ್ರೋಹ ಹಾಗೂ ಮೋಸ ಮಾಡುತ್ತಿದ್ದೀರಾ ಎಂದು ಖಾದರ್ ಅಸಮಾಧಾನ ವ್ಯಕ್ತಪಡಿಸಿದರು.

ನಿಮ್ಮ ಆಶಿಸ್ತು ಹಾಗೂ ಪೀಠಕ್ಕೆ ತೋರಿದ ಅಗೌರವ, ಒಂದು ಸಣ್ಣ ವಿಚಾರವನ್ನು ನಿಮ್ಮರಾಜಕೀಯಕ್ಕೆ ಬಳಸಿಕೊಂಡು, ಇಡೀ ಸದನದ ಕಲಾಪ ವ್ಯರ್ಥ ಮಾಡಿಕೊಂಡು, ಸಮಯ ಹಾಳು ಮಾಡಿದ್ದೀರಾ. ನೀವು ಉತ್ತಮವಾಗಿ ಕೆಲಸ ಮಾಡಿದಾಗ ನಿಮಗೆ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿ. ಆದರೆ, ಅಶಿಸ್ತು ತೋರಿದಾಗ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ಹೇಳಿದರು.

ಪ್ರಜಾಪ್ರಭುತ್ವದ ಈ ಸಂಸದೀಯ ವ್ಯವಸ್ಥೆಯಲ್ಲಿ ಸದನ ಅತ್ಯಂತ ಗೌರವ ಹಾಗೂ ಪವಿತ್ರವಾದದ್ದು. ಸಭಾಧ್ಯಕ್ಷರ ಪೀಠವು ಅತ್ಯಂತ ಗೌರವಯುತವಾದದ್ದು. ಈ ಪೀಠದ ಗೌರವ ಉಳಿಸುವುದು ನಮ್ಮನಿಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ವ್ಯವಸ್ಥೆಗೆ ಧಕ್ಕೆ ಬರುವಂತಹ, ಸದನದಲ್ಲಿ ಅಗೌರವ, ಅಶಿಸ್ತು ಬೇಜವಾಬ್ದಾರಿಯಿಂದ ನಡೆದುಕೊಂಡು, ನಮ್ಮ ರಾಜ್ಯಕ್ಕೆ ಹಾಗೂ ಜನತೆಗೆ ಕಪ್ಪು ಚುಕ್ಕೆ ಬರುವಂತಹ ಕೆಲಸ ಮಾಡಿದರೆ, ಈ ಪೀಠ ಅದನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಸದನದಲ್ಲಿ ಅಸಭ್ಯವಾಗಿ ಹಾಗೂ ಅಗೌರವದಿಂದ ನಡೆದುಕೊಂಡ ಸದಸ್ಯರನ್ನು ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮಾವಳಿ 348ರ ಅನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಈ ಅಧಿವೇಶನ ಮುಗಿಯುವವರೆಗೆ ಅಮಾನತ್ತುಗೊಳಿಸಿ ಸದನಕ್ಕೆ ಬಾರದಂತೆ ತಡೆ ಹಿಡಿಯಬೇಕು ಎಂದು ಪ್ರಸ್ತಾವನೆ ಮಂಡಿಸಿದರು.

ಬಳಿಕ ಸ್ಪೀಕರ್ ಯು.ಟಿ.ಖಾದರ್ ಪ್ರಸ್ತಾವನೆಯನ್ನು ಸಭೆಯ ಮತಕ್ಕೆ ಹಾಕಿ, ಅಂಗೀಕಾರ ಪಡೆದುಕೊಂಡು, 10 ಮಂದಿ ಬಿಜೆಪಿ ಸದಸ್ಯರು ಸದನದಿಂದ ಕೂಡಲೆ ಹೊರಗೆ ಹೋಗುವಂತೆ ಆದೇಶಿಸಿ, ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.

ನಂತರ ಅಮಾನತುಗೊಂಡವರನ್ನು ಸದನದಿಂದ ಹೊರಕಳಿಸಲು ಮಾರ್ಷಲ್ಸ್‌ ಒಳಬಂದರು. ಅಷ್ಟರಲ್ಲಿ ಬಿಜೆಪಿಯ ಇತರ ಶಾಸಕರು ಅಮಾನತುಗೊಂಡ ಶಾಸಕರಿಗೆ ತಡೆಗೋಡೆಯಾಗಿ ನಿಂತರು. ಅಮಾನತುಗೊಂಡ ಶಾಸಕರನ್ನು ಮಾರ್ಷಲ್ಗಳು ಬಲವಂತವಾಗಿ ಹೊರಗೆ ಕಳುಹಿಸದಂತೆ ತಡೆಯಲು ಬಿಜೆಪಿಯ ಇತರ ಶಾಸಕರು ಪ್ರಯತ್ನಿಸಿದರು. ಆದಾಗ್ಯೂ, ಶಾಸಕರನ್ನು ಬಲವಂತದಿಂದ ಹೊರದಬ್ಬುವಲ್ಲಿ ಮಾರ್ಷಲ್ಗಳು ಯಶಸ್ವಿಯಾದರು.

error: Content is protected !! Not allowed copy content from janadhvani.com