janadhvani

Kannada Online News Paper

ಇನ್ಮುಂದೆ ಉಮ್ರಾ ಯಾತ್ರೆ ಪ್ರಕ್ರಿಯೆಗಳು ಸುಲಭ- ‘ನುಸುಕ್ ‘ ಆ್ಯಪ್‌ ಮೂಲಕ ಆನ್‌ಲೈನ್‌ನಲ್ಲಿ ವೀಸಾ ಲಭ್ಯ

ಮುಹರ್ರಂ 1 ರಿಂದ (ಜುಲೈ 19) ಉಮ್ರಾ ಯಾತ್ರಿಕರ ಆಗಮನವು ಆನ್‌ಲೈನ್ ವೀಸಾದೊಂದಿಗೆ ಪ್ರಾರಂಭ

ರಿಯಾದ್: ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವಾಲಯವು ಉಮ್ರಾಗೆ ಆನ್‌ಲೈನ್ ವೀಸಾಗಳನ್ನು ನೀಡಲು ಪ್ರಾರಂಭಿಸಿದೆ ಎಂದು ಘೋಷಿಸಿದೆ. ಉಮ್ರಾ ಯಾತ್ರೆಗೆ ವಿಶ್ವದಾದ್ಯಂತ ಹೆಚ್ಚಿನ ಜನರನ್ನು ದೇಶಕ್ಕೆ ಕರೆತರುವ ಕ್ರಮಗಳ ಭಾಗವಾಗಿದೆ ಇದು. ಆನ್‌ಲೈನ್ ವೀಸಾದೊಂದಿಗೆ ಪ್ರವೇಶ ಪ್ರಕ್ರಿಯೆಗಳು ಸುಲಭವಾಗಲಿದೆ.

ಉಮ್ರಾ ವೀಸಾ ಅರ್ಜಿಯನ್ನು ‘ನುಸುಕ್’ ಮೊಬೈಲ್ ಅಪ್ಲಿಕೇಶನ್ ಮೂಲಕ ಸಲ್ಲಿಸಬೇಕು. ಮುಹರ್ರಂ 1 ರಿಂದ (ಜುಲೈ 19) ಉಮ್ರಾ ಯಾತ್ರಿಕರ ಆಗಮನವು ಆನ್‌ಲೈನ್ ವೀಸಾದೊಂದಿಗೆ ಪ್ರಾರಂಭವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ನುಸುಕ್ ಅಪ್ಲಿಕೇಶನ್‌ನೊಂದಿಗೆ ವಿಶ್ವದ ವಿವಿಧ ಭಾಗಗಳಿಂದ ಮಕ್ಕಾ ಮತ್ತು ಮದೀನಾಕ್ಕೆ ಯಾತ್ರಾರ್ಥಿಗಳ ಆಗಮನವು ಸುಲಭವಾಗಲಿದೆ. ಯಾತ್ರಿಕರು ವಸತಿ ಮತ್ತು ಪ್ರಯಾಣದಂತಹ ಸೇವೆಗಳನ್ನು ‘ನುಸುಕ್’ ನಲ್ಲಿ ಆಯ್ಕೆ ಮಾಡಬಹುದಾಗಿದೆ.

ಗಲ್ಫ್ ದೇಶಗಳಿಂದ ಪ್ರವಾಸಿ ವೀಸಾದಲ್ಲಿ ಬರುವ ವಲಸಿಗರು, ಷೆಂಗೆನ್ ದೇಶಗಳು, USA ಮತ್ತು UK ವೀಸಾ ಹೊಂದಿರುವವರು ಸೌದಿ ಅರೇಬಿಯಾಕ್ಕೆ ಆಗಮಿಸುವ ಮೊದಲು ಉಮ್ರಾ ಮತ್ತು ರೌಳಾ ಸಂದರ್ಶನಕ್ಕೆ ಅನುಮತಿಗಳನ್ನು ನುಸುಕ್ ಅಪ್ಲಿಕೇಶನ್ ಮೂಲಕ ಪಡೆಯಬಹುದು.

ಅಲ್ಲದೆ, ಪ್ರಸ್ತುತ ಸೌದಿ ಅರೇಬಿಯಾದಲ್ಲಿರುವ ವಲಸಿಗರು ಕೂಡ ಉಮ್ರಾ ಮತ್ತು ರೌಳಾ ಸಂದರ್ಶನಕ್ಕೆ ನುಸುಕ್ ಅಪ್ಲಿಕೇಶನ್ ಮೂಲಕ ಪರವಾನಗಿಯನ್ನು ಪಡೆಯಬೇಕಾಗಿದೆ.

ಯಾವುದೇ ರೀತಿಯ ವೀಸಾದಲ್ಲಿ ಆಗಮಿಸುವ ಎಲ್ಲಾ ವಿದೇಶಿಯರಿಗೆ ನುಸುಕ್ ಮೂಲಕ ಪರವಾನಿಗೆಯನ್ನು ಪಡೆದು ಉಮ್ರಾ ನಿರ್ವಹಿಸಲು ಅನುಮತಿಸಲಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯವು ತಿಳಿಸಿದೆ.

ಕಳೆದ ವರ್ಷದಿಂದ ಉಮ್ರಾ ವೀಸಾಗಳ ಕಾಲಾವಧಿಯನ್ನು 90 ದಿನಗಳವರೆಗೆ ವಿಸ್ತರಿಸಲಾಗಿದೆ. ಉಮ್ರಾ ವೀಸಾ ಹೊಂದಿರುವವರು ದೇಶದ ಯಾವುದೇ ಸ್ಥಳಗಳಿಗೆ ಭೇಟಿ ನೀಡಲು ಹಾಗೂ ಯಾವುದೇ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಸಲು ಅನುಮತಿಸಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

error: Content is protected !! Not allowed copy content from janadhvani.com