janadhvani

Kannada Online News Paper

ಹಜ್-2023: 20 ಲಕ್ಷಕ್ಕೂ ಮಿಕ್ಕ ವಿಶ್ವಾಸಿಗಳು ಸಂಗಮಿಸಿದ ವಿಶ್ವಮಹಾ ಸಂಗಮಕ್ಕೆ ವಿದಾಯ

ಮುಂದಿನ ಜೀವನವು ಸತ್ಯ ಮತ್ತು ಸತ್ಕಾರ್ಯಗಳೊಂದಿಗೆ ಸಂಪನ್ನವಾಗಿರಲಿದೆ ಎಂಬ ದೃಢವಾದ ಪ್ರತಿಜ್ಞೆಯೊಂದಿಗೆ ವಿದಾಯ

ಮಕ್ಕಾ | ಪ್ರಪಂಚದಾದ್ಯಂತದ ಹಜ್ ಯಾತ್ರಾರ್ಥಿಗಳು ಮೂರು ಜಮ್ರಾಗಳಿಗೆ ಕಲ್ಲೆಸೆಯುವ ಕರ್ಮಗಳನ್ನು ಪೂರ್ಣಗೊಳಿಸಿ ಡೇರೆಗಳ ನಗರವಾದ ಮಿನಾಗೆ ಬೀಳ್ಕೊಡುವ ಮೂಲಕ ಈ ವರ್ಷದ ಹಜ್ ಚಟುವಟಿಕೆಗಳು ಮುಕ್ತಾಯಗೊಂಡವು.

ಮೀನಾದಿಂದ ಯಾತ್ರಾರ್ಥಿಗಳ ನಿರ್ಗಮನವು ಭಾವಪೂರ್ಣವಾಗಿತ್ತು. ತಮ್ಮ ಬದುಕಿನ ಬಹು ದೊಡ್ಡ ಆಸೆಯು ಈಡೇರಿದ ಸಂತಸದಿಂದ ಪುಣ್ಯಭೂಮಿಗೆ ವಿದಾಯ ಹೇಳಿದರು.

ಇದರೊಂದಿಗೆ ಆರು ದಿನಗಳ ಕಾಲ ನಡೆದ ಸುಮಾರು 20 ಲಕ್ಷ ವಿಶ್ವಾಸಿಗಳು ಸಂಗಮಿಸಿದ ವಿಶ್ವಮಹಾ ಸಂಗಮ ಸಂಪನ್ನಗೊಂಡಿತು. ಒಬ್ಬರನ್ನೊಬ್ಬರು ಅಪ್ಪಿಕೊಂಡು ಪ್ರೀತಿಯನ್ನು ಹಂಚುವ ಮೂಲಕ ಬೀಳ್ಕೊಡುವಾಗ ತಾವು ಒಂದೇ ಇಲಾಹನ ದಾಸರಾದ ಮಲಸಹೋದರರು ಎಂದು ಘೋಷಿಸಿದರು.

ಇಸ್ಲಾಮಿಕ್ ನಂಬಿಕೆಯ ಪ್ರಕಾರ, ಪ್ರತಿಯೊಬ್ಬ ಯಾತ್ರಿಕನು ಸಂಪೂರ್ಣವಾಗಿ ಪಾಪಗಳನ್ನು ತೊಳೆದ ನವಜಾತ ಶಿಶುವಿನಂತೆ ಮಿನಾಗೆ ವಿದಾಯ ಹೇಳುತ್ತಾನೆ. ಮುಂದಿನ ಜೀವನವು ಸತ್ಯ ಮತ್ತು ಸತ್ಕಾರ್ಯಗಳೊಂದಿಗೆ ಸಂಪನ್ನವಾಗಿರಲಿದೆ ಎಂಬ ದೃಢವಾದ ಪ್ರತಿಜ್ಞೆಯೊಂದಿಗೆ ಅಲ್ಲಿಂದ ಮರಳುತ್ತಾರೆ.

ಬಹುತೇಕ ಯಾತ್ರಾರ್ಥಿಗಳು ಶುಕ್ರವಾರ ಮಿನಾ ಕಣಿವೆಯಿಂದ ಹೊರಟಿದ್ದರು. ಉಳಿದವರು ಶನಿವಾರ ಕೊನೆಯ ಕಲ್ಲೆಸೆಯುವ ಕರ್ಮವನ್ನು ನೆರವೇರಿಸಿ ಮಿನಾದಿಂದ ಹೊರಟರು. ಅವರು ಕಅ್ ಬಾವನ್ನು ಸಮೀಪಿಸಿ ಪ್ರಾರ್ಥಿಸಿ, ವಿದಾಯ (ತ್ವವಾಫ್) ಪ್ರದಕ್ಷಿಣೆಯನ್ನು ಮಾಡುತ್ತಾರೆ. ಮತ್ತು ಮೆಕ್ಕಾಗೆ ವಿದಾಯ ಹೇಳುವರು.ಯಾತ್ರಾರ್ಥಿಗಳ ನಿರ್ಗಮನ ಭಾವಪೂರ್ಣವಾಗಿತ್ತು. ತಮ್ಮ ಬದುಕಿನ ಬಹು ದೊಡ್ಡ ಆಸೆಯ ಈಡೇರಿಕೆಯೊಂದಿಗೆ ಪುಣ್ಯಭೂಮಿಗೆ ವಿದಾಯ ಹೇಳಿದರು. ವಿದಾಯ ತ್ವವಾಫ್ ತುಂಬಾ ಜನಸಂದಣಿಯಿಂದ ಕೂಡಿದೆ. ಜನಸಂದಣಿ ಹೆಚ್ಚಾದಂತೆ ಮಸ್ಜಿದುಲ್-ಹರಾಮ್‌ಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ಮದೀನಾ ರೌಳಾ ಶರೀಫ್ ಸಂದರ್ಶನ

ಹಜ್ ಕರ್ಮ ಆರಂಭಿಸುವ ಮುಂಚಿತವಾಗಿ ನೇರ ಮದೀನಾ ತಲುಪುವ ಯಾತ್ರಿಕರು, ಮದೀನಾದ ಮಸ್ಜಿದುನ್ನಬವಿ ಅಥವಾ ಪ್ರವಾದಿ ಮಸೀದಿಗೆ ಭೇಟಿ ನೀಡಿ ಪುಣ್ಯ ಪ್ರವಾದಿ ಸ.ಅ. ರವರ ರೌಳಾ ಸಂದರ್ಶನ ನಡೆಸಿದ ನಂತರ ಮಕ್ಕಾಕ್ಕೆ ಆಗಮಿಸುತ್ತಾರೆ. ಮುಂಚಿತವಾಗಿ ಮದೀನಾ ಝಿಯಾರತ್‌ಗೆ ತೆರಳದವರು ಹಜ್ ಕರ್ಮ ಪೂರ್ಣಗೊಂಡ ಬಳಿಕ ಮದೀನಾಕೆ ಭೇಟಿ ನೀಡುವರು.

ತಾಪಮಾನ ಹೆಚ್ಚಳ

ಈ ವರ್ಷದ ಹಜ್ ಸಮಯದಲ್ಲಿ, ಅರಫಾ ಮತ್ತು ಮಿನಾ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ತಾಪಮಾನವನ್ನು ಅನುಭವಿಸಿದೆ.

6,300 ಯಾತ್ರಾರ್ಥಿಗಳು ಬಿಸಿಲಿನ ಬೇಗೆಗೆ ಚಿಕಿತ್ಸೆ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ. ಇದುವರೆಗೆ ಸೌದಿ ಅರೇಬಿಯಾದ ವಿವಿಧ ಆಸ್ಪತ್ರೆಗಳಲ್ಲಿ 2,15,000 ಹಜ್ ಯಾತ್ರಿಕರು ಚಿಕಿತ್ಸೆ ಪಡೆದಿದ್ದಾರೆ.

ಮೂರು ವರ್ಷಗಳ ಅಂತರದ ನಂತರ 65 ವರ್ಷ ಮೇಲ್ಪಟ್ಟವರಿಗೆ ಹಜ್ ಯಾತ್ರೆಯ ಅವಕಾಶ ಲಭಿಸಿರುವುದರಿಂದ ಈ ಬಾರಿ ವಯೋವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಸುಮಾರು 40 ಭಾರತೀಯ ಯಾತ್ರಿಗಳು ವಿವಿಧ ಕಾರಣಗಳಿಂದ ಹಜ್ ಸಮಯದಲ್ಲಿ ಮೃತಪಟ್ಟಿದ್ದಾರೆ.

KCF-HVC ಸೇವೆಗೆ ಸೌದಿ ಆರೋಗ್ಯ ಮಂತ್ರಾಲಯದಿಂದ ಮೆಚ್ಚುಗೆ

ಹಜ್ ಯಾತ್ರಿಕರ ಸೇವೆಯಲ್ಲಿ ಸದಾ ಸನ್ನದ್ಧರಾಗಿರುವ ಕನ್ನಡಿಗರ ಹೆಮ್ಮೆಯ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ( KCF) ಇದರ ಹಜ್ ವಾಲೇಂಟೀರ್ ಕೋರ್-23 (HVC) ತಂಡದ ಸೇವೆಯನ್ನು ಮೆಚ್ಚಿ ಸೌದಿ ಅರೇಬಿಯಾ ಆರೋಗ್ಯ ಮಂತ್ರಾಲಯದಿಂದ (Ministry of Health) ಪ್ರಮಾಣ ಪತ್ರ ನೀಡಿ ಗೌರವಿಸಲಾಗಿದೆ.

error: Content is protected !! Not allowed copy content from janadhvani.com