ಕಳೆದವಾರ ರಿಯಾದಿನ ಶಿಫಾ ಪ್ರಾಂತ್ಯದಲ್ಲಿ ಇಶಾ ನಮಾಝ್ ನಿರ್ವಹಿಸಲು ಮಸೀದಿಗೆ ತೆರಳಿದ ವೇಳೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಎಲ್ ಟಿ ಮುಹಮ್ಮದ್ (ಬಾವುಚ್ಚ) ಪುತ್ತೂರು ಇವರ ಮೃತದೇಹವನ್ನು ಊರಿಗೆ ತಲುಪಿಸುವ ಕೆಲಸವು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನೇತೃತ್ವದಲ್ಲಿ ನಡೆಯಿತು.
ಮರಣ ವಾರ್ತೆ ತಿಳಿದ ಕೂಡಲೇ ಅನಿವಾಸಿ ಕನ್ನಡಿಗರ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ಸಾಂತ್ವನ ಇಲಾಖೆಯ ನಾಯಕರು ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ನಿಧನರಾಗುವ ಅನಿವಾಸಿಗಳ ಮೃತದೇಹವನ್ನು ಇಲ್ಲಿ ದಫನ ಮಾಡುವುದು ಅಥವಾ ಊರಿಗೆ ಕೊಂಡೊಯ್ಯುವುದಿದ್ದರೆ ವಲಸೆ ನೀತಿಗೆ ಸಂಬಂಧಿಸಿದ ಹಲವಾರು ದಾಖಲೆ ಪತ್ರಗಳನ್ನು ಸರಿಪಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತೀಯ ಧೂತವಾಸ ಕೇಂದ್ರ, ಸ್ಥಳೀಯ ಆರೋಗ್ಯ ಇಲಾಖೆ, ಸೌದಿ ವಲಸೆ ಪ್ರಾಧಿಕಾರ, ಪೊಲೀಸ್ ಹಾಗೂ ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಕಡೆಗಳಿಂದ ಸಿಗಬೇಕಾದ ದಾಖಲೆಗಳನ್ನು ಸರಿಪಡಿಸಲು ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿಯ ಸಾಂತ್ವನ ಇಲಾಖೆಯ ಕನ್ವೀನರ್ ಬಷೀರ್ ತಲಪ್ಪಾಡಿ, ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಬಾಷಾ ಗಂಗಾವಳಿ, ರಾಷ್ಟ್ರೀಯ ಸಮಿತಿ ನಾಯಕರಾದ ಮುಹಮ್ಮದ್ ಮಲೆಬೆಟ್ಟು, ಹನೀಫ್ ಕಣ್ಣೂರು, ಸಲಾಂ ಹಳೆಯಂಗಡಿ, ಝೋನ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು ಮುಂತಾದ ನಾಯಕರ ಸಲಹೆ ಸೂಚನೆಯಂತೆ ಕೆಸಿಎಫ್ ರಿಯಾದ್ ಝೋನ್ ಮುಖಂಡರು ಮುಂಚೂಣಿಯಲ್ಲಿದ್ದು ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೆಸಿಎಫ್ ರಿಯಾದ್ ಝೋನ್ ಸಾಂತ್ವನ ಇಲಾಖೆಯ ನಾಯಕರಾದ ಅಶ್ರಫ್ KMS, ದಾವೂದ್ ಸಅದಿ, ಫಾರೂಕ್ ಕೊಡಿಪ್ಪಾಡಿ, ಮೃತರ ಸಂಬಂಧಿ ಶಫೀಕ್ ಪುತ್ತೂರು ಮುಂತಾದವರು ತಮ್ಮ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಇದಕ್ಕಾಗಿ ಶ್ರಮಿಸಿದರ ಫಲವಾಗಿ ಕೇವಲ ನಾಲ್ಕು ದಿನಗಳಲ್ಲಿ ಎಲ್ಲಾ ದಾಖಲೆಗಳನ್ನು ಸರಿಪಡಿಸಿ ಮೃತದೇಹವನ್ನು ಊರಿಗೆ ಕಳುಹಿಸಲು ಸಾಧ್ಯವಾಯಿತು. ಕೆಸಿಎಫ್ ರಿಯಾದ್ ತಂಡದ ಈ ಸೇವೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
20/06/23 ರಂದು ಮಂಗಳವಾರ ಅಸರ್ ನಮಾಝ್ ಬಳಿಕ ನಡೆದ ಜನಾಝಾ ನಮಾಝ್ ನಲ್ಲಿ ಕೆಸಿಎಫ್ ರಾಷ್ಟ್ರೀಯ ಹಾಗೂ ಝೋನ್ ನೇತಾರರು, ಮೃತರ ಕುಟುಂಬಸ್ಥರು, ಸ್ಥಳೀಯರು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. 21/06/23 ರಂದು ಬುಧವಾರ ಬೆಳಿಗ್ಗೆ ಕೋಝಿಕ್ಕೋಡ್ ವಿಮಾನ ನಿಲ್ದಾಣಕ್ಕೆ ತಲುಪಿದ ಮೃತದೇಹವನ್ನು ಅಲ್ಲಿಂದ ಕೆಸಿಎಫ್ ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ತಲುಪಿಸಲಾಗಿದೆ. ವಿಮಾನ ನಿಲ್ದಾಣದಿಂದ ಮೃತದೇಹವನ್ನು ಪುತ್ತೂರಿಗೆ ತಲುಪಿಸಲು ಮೃತರ ಕುಟುಂಬಸ್ಥರು ಹಾಗೂ ಆಂಬ್ಯುಲೆನ್ಸ್ ಚಾಲಕ ದಾವೂದ್ ಸಹಕರಿಸಿದರು.