ದುಬೈ: ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಕಾರಣ ಕನಿಷ್ಠ ನಾಲ್ಕು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ವರದಿ ಮಾಡಿಕೊಳ್ಳುವಂತೆ ದುಬೈ ವಿಮಾನ ನಿಲ್ದಾಣ ಸೂಚಿಸಿದೆ. ಚೆಕ್ ಇನ್ ಪ್ರಕ್ರಿಯೆಯನ್ನು ಶೀಘ್ರ ಮುಗಿಸಿ ಜನ ದಟ್ಟಣೆ ತಗ್ಗಿಸಲು ಸಹಕರಿಸುವಂತೆ ಅಧಿಕೃತರು ಸೂಚಿಸಿದ್ದಾರೆ.
2019 ರ ಬಳಿಕ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ದಟ್ಟಣೆಯು ಈ ಬಾರಿಯ ಬಕ್ರೀದ್ ರಜಾ ದಿನಗಳಲ್ಲಿ ಉಂಟಾಗಲಿದೆ. ಯುಎಇಯ ಬಹುತೇಕ ವಿಮಾನ ನಿಲ್ದಾಣಗಳು ಮುಂದಿನ ದಿನಗಳಲ್ಲಿ ಭಾರೀ ದಟ್ಟಣೆಯನ್ನು ಅನುಭವಿಸಲಿವೆ. ಈ ಪರಿಸ್ಥಿತಿಯಲ್ಲಿ, ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣವು ಕನಿಷ್ಠ ನಾಲ್ಕು ಗಂಟೆಗಳ ಮುಂಚಿತವಾಗಿ ವಿಮಾನ ನಿಲ್ದಾಣಕ್ಕೆ ವರದಿ ಮಾಡಲು ಪ್ರಯತ್ನಿಸುವಂತೆ ಸೂಚಿಸಿದೆ.
ಸಿಟಿ ಚೆಕ್-ಇನ್ ವ್ಯವಸ್ಥೆಯಿರುವ ವಿಮಾನಯಾನ ಸಂಸ್ಥೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಅಂತಹ ಕೇಂದ್ರಗಳಲ್ಲಿ ಲಗೇಜುಗಳನ್ನು ಹಸ್ತಾಂತರಿಸುವ ಮೂಲಕ ಚೆಕ್-ಇನ್ ಪ್ರಕ್ರಿಯೆಯನ್ನು ಮುಂಚಿತವಾಗಿ ಪೂರ್ಣಗೊಳಿಸಬೇಕು.
ಆನ್‌ಲೈನ್ ಚೆಕ್ ಇನ್ ಸೌಲಭ್ಯವನ್ನೂ ಬಳಸಬೇಕು. ಪ್ರಯಾಣ ದಾಖಲೆಗಳು ನಿಖರವಾಗಿವೆ ಎಂದು ಖಚಿತಪಡಿಸಿಕೊಳ್ಳಬೇಕು. 12 ವರ್ಷ ಮೇಲ್ಪಟ್ಟವರು ದುಬೈ ವಿಮಾನ ನಿಲ್ದಾಣದಲ್ಲಿ ಸ್ಮಾರ್ಟ್ ಗೇಟ್ ಬಳಸಬೇಕು ಎಂದು ಸೂಚಿಸಲಾಗಿದೆ.
ಅಬುಧಾಬಿಯಲ್ಲಿ, ವಿಮಾನಯಾನ ಸಂಸ್ಥೆಗಳು ವಾಸ ಸ್ಥಳಕ್ಕೆ ಭೇಟಿ ನೀಡಿ ಚೆಕ್-ಇನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ವ್ಯವಸ್ಥೆಯನ್ನು ಪ್ರಾರಂಭಿಸಿದೆ.