ಉಳ್ಳಾಲ,ಮಾ.8: ಇಲ್ಲಿನ ಇತಿಹಾಸ ಪ್ರಸಿದ್ಧ ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ದರ್ಗಾ ಮತ್ತು ಕೇಂದ್ರ ಜುಮಾ ಮಸೀದಿ(402) ನೂತನ ಅಧ್ಯಕ್ಷರಾದ ಬಿ.ಜಿ.ಹನೀಫ್ ಹಾಜಿ ನೇತೃತ್ವದ ಆಡಳಿತ ಸಮಿತಿಯು ಇಂದು ಪ್ರಮಾಣವಚನ ಸ್ವೀಕರಿಸುವ ಮೂಲಕ ಅಸ್ತಿತ್ವಕ್ಕೆ ಬಂದಿದೆ.
ಸಮಿತಿಯ ಉಪಾಧ್ಯಕ್ಷರಾದ ಅಳೇಕಲ ಮೊಹಲ್ಲಾದ ರೈಟ್ ವೇ ಅಶ್ರಫ್,ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕೊಶಾಧಿಕಾರಿ ನಾಝಿಂ ಕೋಟೆಪುರ ಸೇರಿದಂತೆ ನೂತನ ಸಮಿತಿಯ ಸರ್ವ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.
ಇತ್ತೀಚೆಗೆ ರಾಜ್ಯ ವಕ್ಫ್ ಮಂಡಳಿಯ ನಿರ್ದೇಶದಂತೆ ನ್ಯಾಯುತ ಚುನಾವಣೆ ನಡೆಸಿ, 55 ಸದಸ್ಯರನ್ನು ಆರಿಸಲಾಗಿತ್ತು, ಆನಂತರ, ವಖ್ಫ್ ಬೋರ್ಡ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೆಚ್ಚು ಮತಗಳಿಸುವ ಮೂಲಕ ಬಿ.ಜಿ.ಹನೀಫ್ ಹಾಜಿಯವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.
ಇಂದು ಉಳ್ಳಾಲದಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿ ಪ್ರಮಾಣ ವಚನ ಬೋಧಿಸುವ ಮೂಲಕ ನೂತನ ಆಡಳಿತ ಸಮಿತಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಈ ಮೂಲಕ, ಉಳ್ಳಾಲ ದರ್ಗಾದಲ್ಲಿ 7 ವರೆ ವರ್ಷಗಳ ಬಳಿಕ ಮತ್ತೆ ನ್ಯಾಯುತ ನೂತನ ಸಮಿತಿಯು ಅಸ್ತಿತ್ವಕ್ಕೆ ಬಂದಿದೆ.
ಕೋಟೆಪುರ, ಮೇಲಂಗಡಿ, ಮುಕ್ಕಚೇರಿ, ಅಳೇಕಲ, ಕಲ್ಲಾಪು ಹೀಗೆ 5 ಕರಿಯ (ವಲಯ)ಗಳಿಂದ ತಲಾ 11 ಮಂದಿಯಂತೆ 55 ಮಂದಿ ಸದಸ್ಯರ ಆಯ್ಕೆಗೆ 80 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
2016-17 ನೇ ಸಾಲಿನಲ್ಲಿ ನ್ಯಾಯಯುತವಾದ ಚುನಾವಣೆ ನಡೆಯದೆ ಅನಧಿಕೃತವಾಗಿ ಆಡಳಿತವನ್ನು ವಶಪಡಿಸಿಕೊಂಡು ಸ್ವಯಂ ಘೋಷಿತವಾಗಿ ಪದಾಧಿಕಾರಿಗಳನ್ನು ನೇಮಿಸಿ ಪ್ರಸ್ತುತ ವಜಾಗೊಂಡಿರುವ ಅಬ್ದುಲ್ ರಶೀದ್ ಮತ್ತು ಸಹವರ್ತಿಗಳು ಕಳೆದ 7ವರೆ ವರ್ಷದಿಂದ ಕಾನೂನು ಉಲ್ಲಂಘನೆ, ಅವ್ಯವಹಾರ, ಭ್ರಷ್ಟಾಚಾರ, ದಬ್ಬಾಳಿಕೆ, ಸರ್ವಾಧಿಕಾರ ಮತ್ತು ಸಮಾಜಘಾತುಕ ಶಕ್ತಿಗಳ ಪೋಷಣೆಯನ್ನು ನಡೆಸುತ್ತಾ ಬಂದಿತ್ತು.