janadhvani

Kannada Online News Paper

ಎಸ್.ವೈ.ಎಸ್. ತವಸ್ಸುಲ್ ಡೇ: ಉಳ್ಳಾದಲ್ಲಿ ಅಧಿಕೃತ ಚಾಲನೆ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಮೂವತ್ತನೇ ವರ್ಷಾಚರಣೆಯು ಜನವರಿ 24 ರಂದು ಶಿವಮೊಗ್ಗದಲ್ಲಿ ಉದ್ಘಾಟನೆಗೊಳ್ಳಲಿದ್ದು, ಇದರ ಅಂಗವಾಗಿ ಹಮ್ಮಿಕೊಂಡ ‘ತವಸ್ಸುಲ್ ಡೇ’ ಕಾರ್ಯಕ್ರಮಕ್ಕೆ ಉಳ್ಳಾಲ ಸಯ್ಯದ್ ಮದನಿ‌ ಮಖಾಂ ಶರೀಫ್‌ ಝಿಯಾರತ್‌ನೊಂದಿಗೆ ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್ ಅಧಿಕೃತವಾಗಿ‌ ಚಾಲನೆ ನೀಡಿದರು.

ರಾಜ್ಯದ ಎಲ್ಲ ಸೆಂಟರ್‌ಗಳಲ್ಲಿ ಮಹಾತ್ಮರ ಮಖಾಂ ಝಿಯಾರತ್‌ಗಳು ಹಾಗೂ ಬ್ರಾಂಚ್ ಮಟ್ಟದಲ್ಲಿ ಸ್ಥಳೀಯ ಖಬರ್‌ಸ್ಥಾನಗಳಲ್ಲಿ ಸಾಮೂಹಿಕ ಝಿಯಾರತ್ ನಡೆಸುವ ಕಾರ್ಯಕ್ರಮ ಇದಾಗಿದ್ದು ಜನವರಿ ಒಂದು ಬೆಳಗ್ಗೆಯಿಂದ ಸಾಯಾಂಕಾಲ ತನಕ ಸಮಯಾವಕಾಶ ನೀಡಲಾಗಿದೆ.

ಉಳ್ಳಾಲ ಸಯ್ಯಿದ್ ಮದನಿ ಮಖಾಂ, ಮುಹ್ಯಿದ್ದೀನ್ ಬಾವಾ ಮಖಾಂ ಹಾಗೂ ಶೈಖುನಾ ಅಹ್ಮದ್ ಬಾವಾ ಉಸ್ತಾದ್ ಮಖಾಂಗಳಲ್ಲಿ ಝಿಯಾರತ್ ಬಳಿಕ ನಡೆದ ಹ್ರಸ್ವ ಸಮಾರಂಭದಲ್ಲಿ ಡಾ.ಝೈನೀ ಕಾಮಿಲ್ ಸಂದೇಶ ಭಾಷಣ ಮಾಡಿದರು. ರಾಜ್ಯ ಕಾರ್ಯದರ್ಶಿ ಹನೀಫ್ ಹಾಜಿ ಉಳ್ಳಾಲ, ಕೆ.ಎಂ.ಸಿದ್ದೀಖ್ ಮೋಂಟುಗೋಳಿ ಶುಭ ಹಾರೈಸಿದರು. ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಸ್ವಾಗತಿಸಿ ಸಯ್ಯಿದ್ ಜಲಾಲುದ್ದೀನ್ ತಂಙಳ್ ಉಳ್ಳಾಲ್ ಧನ್ಯವಾದ ಹೇಳಿದರು