ನವದೆಹಲಿ: ಕೋವಿಡ್ ಭೀತಿ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಪತ್ರ ಬರೆಯುವ ಮೂಲಕ ಕೊರೊನಾ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಎಲ್ಲಾ ರಾಜ್ಯಗಳು ಎಚ್ಚರಿಕೆ ವಹಿಸುವಂತೆ ಸಚಿವಾಲಯ ತಿಳಿಸಿದೆ.
ಮುಂಬರುವ ಹಬ್ಬ-ಹರಿದಿನಗಳು ಮತ್ತು ಹೊಸ ವರ್ಷದ ಆಚರಣೆಗಳನ್ನು ಗಮನದಲ್ಲಿಟ್ಟುಕೊಂಡು ‘ಟೆಸ್ಟ್-ಟ್ರ್ಯಾಕ್-ಟ್ರೀಟ್ ಮತ್ತು ವ್ಯಾಕ್ಸಿನೇಷನ್’ ಮೇಲೆ ಕೇಂದ್ರೀಕರಿಸಲು ಈ ಪತ್ರದಲ್ಲಿ ರಾಜ್ಯಗಳಿಗೆ ಸೂಚಿಸಲಾಗಿದೆ. ಮಾಸ್ಕ್ ಧರಿಸಲು, ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಮತ್ತು ದೈಹಿಕ ಅಂತರವನ್ನು ಕಾಪಾಡಿಕೊಳ್ಳಲು ರಾಜ್ಯಗಳ ಜನರಿಗೆ ಮನವಿ ಮಾಡಿದೆ.
ಅಂತರರಾಷ್ಟ್ರೀಯ ವಿಮಾನಗಳಲ್ಲಿನ ಶೇಕಡಾ ಎರಡು ಪ್ರಯಾಣಿಕರನ್ನು ಪರೀಕ್ಷಿಸಲಾಗುವುದು. ರೋಗವನ್ನು ದೃಢೀಕರಿಸುವ ಮಾದರಿಗಳನ್ನು ಆನುವಂಶಿಕ ಅನುಕ್ರಮಕ್ಕಾಗಿ ಕಳುಹಿಸಲಾಗುತ್ತದೆ. ಅಂತರಾಷ್ಟ್ರೀಯ ಪ್ರಯಾಣಿಕರ ತಾಪಮಾನವನ್ನು ಪರಿಶೀಲಿಸಲು (Thermal Screening) ಸಹ ನಿರ್ಧರಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ತಾತ್ಕಾಲಿಕ ಕಠಿಣ ನಿಯಂತ್ರಣವಿಲ್ಲ, ಎರಡು ವಾರಗಳಲ್ಲಿ ಪರಿಶೀಲಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು. ಮತ್ತು ಎಲ್ಲಾ ರಾಜ್ಯಗಳಿಗೆ ಜಾಗರೂಕರಾಗಿರಬೇಕು ಮತ್ತು ಕೋವಿಡ್ -19 ನಿರ್ವಹಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸಲಹೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯಗಳು ಕಳೆದ ಬಾರಿ ಕೊರೊನಾ ಪ್ರಕರಣಗಳ ಉಲ್ಬಣದ ಸಮಯದಲ್ಲಿ ಮಾಡಿದಂತೆ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕಾಗಿದೆ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಆರೋಗ್ಯ ಸಚಿವಾಲಯವು ರಾಜ್ಯಗಳಿಗೆ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಲು ಸಲಹೆ ನೀಡಿದೆ. ಜೊತೆಗೆ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಿ ಮತ್ತು ಆಸ್ಪತ್ರೆಯ ಮೂಲಸೌಕರ್ಯವನ್ನು ಸಿದ್ಧವಾಗಿರಿಸಿಕೊಳ್ಳುವಂತೆ ಹೇಳಿದೆ. ಜೀನೋಮ್ ಅನುಕ್ರಮವನ್ನು ಹೆಚ್ಚಿಸುವತ್ತ ಗಮನಹರಿಸುವಂತೆ ರಾಜ್ಯಗಳಿಗೆ ಕೇಂದ್ರವು ಸೂಚಿಸಿದೆ.
ಜ್ವರದಂತಹ ಲಕ್ಷಣಗಳು ಕಂಡುಬಂದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಉತ್ಸವಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು, ಈವೆಂಟ್ ಸಂಘಟಕರು, ರೆಸ್ಟೋರೆಂಟ್‌ಗಳು ಇತ್ಯಾದಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿ, ಅವರಿಗೆ ವಿಧಾನಗಳನ್ನು ತಿಳಿಸುವಂತೆ ಹೇಳಲಾಗಿದೆ. ಚೀನಾ ಸೇರಿದಂತೆ ಕೆಲವು ದೇಶಗಳಲ್ಲಿ ಕೊರೊನಾ ಅಬ್ಬರ ಶುರುವಾಗಿದ್ದು, ತುಂಬಾ ಎಚ್ಚರಿಕೆ ವಹಿಸುವಂತೆ ದೇಶದ ಜನರಿಗೆ ಕೇಂದ್ರವು ಮನವಿ ಮಾಡಿಕೊಂಡಿದೆ.