janadhvani

Kannada Online News Paper

ಸೌದಿ: ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಕೆಲಸಕ್ಕೆ ತೆರಳಬಾರದು- ಸಚಿವಾಲಯ ಸೂಚನೆ

ಅಂತಹ ಸಂದರ್ಭಗಳಲ್ಲಿ,ದೂರದಿಂದಲೇ ಕೆಲಸ ಮಾಡುವ ವಿಧಾನವನ್ನು ಬಳಸಬಹುದು ಅಥವಾ ಇನ್ನೊಂದು ದಿನದಲ್ಲಿ ಕೆಲಸ ಮಾಡಲು ಸೂಚಿಸಬಹುದು

ರಿಯಾದ್ : ಸೌದಿ ಅರೇಬಿಯಾದಲ್ಲಿ(Saudi Arabia) , ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಮಿಕರು ಕೆಲಸದ ಸ್ಥಳಕ್ಕೆ ತೆರಳಬಾರದು ಎಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ(Ministry of Human Resources and Social Development)ಹೇಳಿದೆ. ಅಂತಹ ಸಂದರ್ಭಗಳಲ್ಲಿ,ದೂರದಿಂದಲೇ ಕೆಲಸ ಮಾಡುವ ವಿಧಾನವನ್ನು ಬಳಸಬಹುದು ಅಥವಾ ಇನ್ನೊಂದು ದಿನದಲ್ಲಿ ಕೆಲಸ ಮಾಡಲು ಸೂಚಿಸಬಹುದು. ಕಾರ್ಮಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಖಾಸಗಿ ಸಂಸ್ಥೆಗಳು ಜಾಗರೂಕರಾಗಿರಬೇಕು ಎಂದು ಸಚಿವಾಲಯ ತಿಳಿಸಿದೆ.

ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಅಪಘಾತಗಳನ್ನು ತಪ್ಪಿಸಲು ಮತ್ತು ಕಾರ್ಮಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸದ ಸ್ಥಳಕ್ಕೆ ಕಾರ್ಮಿಕರು ಬರುವುದನ್ನು ನಿಷೇಧಿಸುವ ಹಕ್ಕನ್ನು ಉದ್ಯೋಗದಾತರು ಹೊಂದಿದ್ದಾರೆಂದು ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಹೇಳಿದೆ.

ಗೈರುಹಾಜರಿ ಅಥವಾ ವಿಳಂಬದ ಸಂದರ್ಭದಲ್ಲಿ, ಕೆಲಸ ಮಾಡಲು ಮತ್ತೊಂದು ದಿನ ಅಥವಾ ಸಮಯವನ್ನು ಸೂಚಿಸಲು ಉದ್ಯೋಗ ಒಪ್ಪಂದ ಪ್ರಕಾರ ಅವಕಾಶವಿದೆ. ಸೌದಿ ಅರೇಬಿಯಾದಲ್ಲಿ
ವಿವಿಧ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂಬ ಹವಾಮಾನ ಇಲಾಖೆಯ ಸೂಚನೆಯ ಬೆನ್ನಲ್ಲೇ ಸಚಿವಾಲಯದಿಂದ ಈ ವಿವರಣೆ ಬಂದಿದೆ.

ಔದ್ಯೋಗಿಕ ಅಪಘಾತಗಳು, ಪ್ರಮುಖ ಕೈಗಾರಿಕಾ ಅಪಘಾತಗಳು ಮತ್ತು ಔದ್ಯೋಗಿಕ ಗಾಯಗಳನ್ನು ತಡೆಗಟ್ಟುವ ನಿಯಮಗಳಿಗೆ ಹೆಚ್ಚುವರಿಯಾಗಿದೆ ಈ ನಿಯಮ. ಕಾರ್ಮಿಕರು ಯಾವುದೇ ಅಪಾಯವನ್ನು ಎದುರಿಸದಂತೆ ಹೆಚ್ಚಿನ ಜಾಗರೂಕರಾಗಿರಲು ಎಲ್ಲಾ ಖಾಸಗಿ ವಲಯದ ಸಂಸ್ಥೆಗಳಿಗೆ ಸಚಿವಾಲಯ ಸೂಚಿಸಿದೆ ಮತ್ತು ಭಾರೀ ಮಳೆಯ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದರೆ, ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com