janadhvani

Kannada Online News Paper

ಸೌದಿ: ‘ಹುರೂಬ್’ ಕಾನೂನಿನಲ್ಲಿ ಪರಿಷ್ಕರಣೆ- ಪ್ರಾಯೋಜಕತ್ವ ಬದಲಾವಣೆಗೆ ಅವಕಾಶ

ಈಗಾಗಲೇ ಹುರೂಬ್‌ ನಲ್ಲಿ ಒಳಪಟ್ಟ ಉದ್ಯೋಗಿಗಳಿಗೆ 15 ದಿನಗಳಲ್ಲಿ ಪ್ರಾಯೋಜಕತ್ವವನ್ನು ಮತ್ತೊಂದು ಉದ್ಯೋಗದಾತರಿಗೆ ಬದಲಾಯಿಸುವ ಅವಕಾಶವನ್ನು ನೀಡಲಾಗಿದೆ.

ರಿಯಾದ್: ಸೌದಿ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು(Ministry of Human Resource and Social Development) ‘ಹುರುಬ್’ (Huroob) ಕಾನೂನನ್ನು ಬದಲಾಯಿಸಿದೆ. ವಿದೇಶಿ ಉದ್ಯೋಗಿ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ ಅಥವಾ ಪರಾರಿಯಾಗಿದ್ದಾರೆ ಎಂದು ಪ್ರಾಯೋಜಕರು ಸಲ್ಲಿಸುವ ದೂರಿನ ಮೇರೆಗೆ ಸಚಿವಾಲಯವು ಅವರ ವಿರುದ್ಧ ಕೈಗೊಳ್ಳುವ ಕಾನೂನು ಕ್ರಮವನ್ನು ‘ಹುರೂಬ್’ ಎನ್ನಲಾಗುತ್ತದೆ.

ಈ ಕಾನೂನಿನ ಹೊಸ ಬದಲಾವಣೆಯಲ್ಲಿ ದೂರನ್ನು ‘ಹುರೂಬ್’ ಎಂದು ನಿಗದಿಪಡಿಸುವ ಮೊದಲು ಕಾರ್ಮಿಕರಿಗೆ ಎರಡು ತಿಂಗಳ ಕಾಲಾವಕಾಶವನ್ನು ನೀಡಲಾಗುತ್ತಿದೆ. ಈ ಅವಧಿಯಲ್ಲಿ ಕೆಲಸಗಾರನು ಅಂತಿಮ ನಿರ್ಗಮನವನ್ನು(Fainal Exit) ಪಡೆದು ದೇಶವನ್ನು ತೊರೆಯಬಹುದು ಅಥವಾ ಹೊಸ ಉದ್ಯೋಗದಾತರಿಗೆ ಪ್ರಾಯೋಜಕತ್ವವನ್ನು ಬದಲಾಯಿಸಬಹುದು.

ಈ ಎರಡು ಅವಕಾಶಗಳಲ್ಲಿ ಒಂದನ್ನು ಬಳಸಿಕೊಳ್ಳದಿದ್ದರೆ 60 ದಿನಗಳು ಪೂರ್ಣಗೊಂಡ ಮೇಲೆ ‘ಹುರೂಬ್’ ಎಂದು ನಿಗದಿಪಡಿಸಲಾಗುತ್ತದೆ. ಅದರೊಂದಿಗೆ, ಕೆಲಸಗಾರನನ್ನು ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ಪರಾರಿಯಾದವನು (ಹುರೂಬ್) ಎಂದು ವರ್ಗೀಕರಿಸಲಾಗುತ್ತದೆ ಮತ್ತು ವಿವಿಧ ಶಿಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಕಾನೂನಿನ ಬದಲಾವಣೆಯು ಭಾನುವಾರ (ಅಕ್ಟೋಬರ್ 23) ಜಾರಿಗೆ ಬಂದಿದೆ.

ಈ ರೀತಿಯಾಗಿ, ಪ್ರಾಯೋಜಕತ್ವವನ್ನು ಬದಲಾಯಿಸುವ ಕಾರ್ಮಿಕರ ಲೆವಿ, ಪ್ರಾಯೋಜಕತ್ವವನ್ನು ಬದಲಾಯಿಸುವ ಶುಲ್ಕ, ಇಕಾಮಾ ಶುಲ್ಕ ಇತ್ಯಾದಿಗಳನ್ನು ಹೊಸ ಉದ್ಯೋಗದಾತರು ಭರಿಸಬೇಕಾಗುತ್ತದೆ.

ಈ ಬದಲಾವಣೆಯು ಹೊಸ ಹುರೂಬ್‌ಗಳಿಗೆ ಅನ್ವಯಿಸುತ್ತದೆ. ಆದರೆ, ಈಗಾಗಲೇ ಹುರೂಬ್‌ ನಲ್ಲಿ ಒಳಪಟ್ಟ ಉದ್ಯೋಗಿಗಳಿಗೆ ಭಾನುವಾರದಿಂದ (ಅಕ್ಟೋಬರ್ 23) 15 ದಿನಗಳಲ್ಲಿ ಪ್ರಾಯೋಜಕತ್ವವನ್ನು ಮತ್ತೊಂದು ಉದ್ಯೋಗದಾತರಿಗೆ ಬದಲಾಯಿಸುವ ಅವಕಾಶವನ್ನು ನೀಡಲಾಗಿದೆ. ಮನೆ ಚಾಲಕರು ಸೇರಿದಂತೆ ಖಾಸಗಿ ಮತ್ತು ಮನೆಕೆಲಸ ವೀಸಾದಲ್ಲಿರುವವರಿಗೆ ಇದು ಅನ್ವಯಿಸುವುದಿಲ್ಲ ಎಂದು ತಿಳಿದುಬಂದಿದೆ.

error: Content is protected !! Not allowed copy content from janadhvani.com