janadhvani

Kannada Online News Paper

ಸೌದಿ: ಕಳೆದು ಹೋದ ಇಖಾಮಾವನ್ನು ಮತ್ತೆ ಪಡೆಯುವ ವಿಧಾನ ಮತ್ತು ಶುಲ್ಕ

ಜವಾಝಾತ್ ನಿರ್ದೇಶನಾಲಯ ಇಲ್ಲದ ಪ್ರದೇಶಗಳಲ್ಲಿ, ಇಖಾಮಾ ನಷ್ಟಗೊಂಡ ಬಗ್ಗೆ ಪೊಲೀಸ್ ಠಾಣೆಯಲ್ಲಿ ವರದಿ ಮಾಡಬೇಕು.

ರಿಯಾದ್ : ಸೌದಿ ಪಾಸ್‌ಪೋರ್ಟ್ (Jawazat) ನಿರ್ದೇಶನಾಲಯವು ಇಖಾಮಾ (Iqama) ಕಳೆದುಹೋದರೆ, ಬದಲಿಗೆ ಇಖಾಮಾ ನೀಡಲು 500 ರಿಯಾಲ್‌ಗಳ ಶುಲ್ಕ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

ಇಖಾಮಾ ಅವಧಿಯಲ್ಲಿ ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿ ಉಳಿದಿದ್ದರೆ ಪರ್ಯಾಯ ಇಖಾಮಾಕ್ಕಾಗಿ 500 ರಿಯಾಲ್‌ಗಳ ಶುಲ್ಕವನ್ನು ಪಾವತಿಸಬೇಕು. ಶುಲ್ಕವನ್ನು ಸದ್ದಾದ್ ವ್ಯವಸ್ಥೆಯ ಮೂಲಕ ಪಾವತಿಸಬೇಕು. ಪರ್ಯಾಯ ಇಖಾಮಾ ಪಡೆಯಲು ಜವಾಝಾತ್ (Jawazat) ನಿರ್ದೇಶನಾಲಯಕ್ಕೆ ಇಖಾಮ ನಷ್ಟವಾಗಿರುವ ಬಗ್ಗೆ ಮಾಹಿತಿ ನೀಡಬೇಕು ಎಂಬ ಷರತ್ತು ಇದೆ.

ಜವಾಝಾತ್ ನಿರ್ದೇಶನಾಲಯ ಇಲ್ಲದ ಪ್ರದೇಶಗಳಲ್ಲಿ, ಇಖಾಮಾ ನಷ್ಟಗೊಂಡ ಬಗ್ಗೆ ಪೊಲೀಸ್ ಠಾಣೆಯಲ್ಲಿ ವರದಿ ಮಾಡಬೇಕು. ಉದ್ಯೋಗದಾತ ಅಥವಾ ಪೋಷಕರು ಜವಾಝಾತ್ ನಿರ್ದೇಶನಾಲಯದ ಮುಖ್ಯಸ್ಥರಿಗೆ ಇಖಾಮಾ ನಷ್ಟಕ್ಕೆ ಕಾರಣ ಮತ್ತು ನಷ್ಟಗೊಂಡ ಸ್ಥಳವನ್ನು ಸೂಚಿಸುವ ಅರ್ಜಿಯನ್ನು ಸಲ್ಲಿಸುವುದು ಶರತ್ತಿನ ಭಾಗವಾಗಿದೆ.

ಇಖಾಮಾ ಹೊಂದಿರುವವರ ಮಾನ್ಯವಾದ ಪಾಸ್‌ಪೋರ್ಟ್‌ ಮತ್ತು ಕಳೆದು ಹೋದ ಇಖಾಮಾದ ಪ್ರತಿ ಇದ್ದರೆ ಅದನ್ನೂ ಹಾಜರುಪಡಿಸಬೇಕು.

ಇಖಾಮಾ ನಷ್ಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಜವಾಝಾತ್ ನಿರ್ದೇಶನಾಲಯದಲ್ಲಿ ವಿಶೇಷ ಅರ್ಜಿಯನ್ನು ಭರ್ತಿ ಮಾಡಬೇಕು. ಇದಲ್ಲದೇ ಪರ್ಯಾಯ ಇಖಾಮಾಗೆ ಬೇಕಾದ ಫಾರಂ ನ್ನೂ ಭರ್ತಿ ಮಾಡಿ ಸಲ್ಲಿಸಬೇಕು. ಪಾಸ್‌ಪೋರ್ಟ್‌ನಲ್ಲಿರುವ ಮಾಹಿತಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ರೀತಿಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಭರ್ತಿ ಮಾಡಿದ ಫಾರಂ ಮೇಲೆ ಉದ್ಯೋಗದಾತನು ಸಹಿ ಮತ್ತು ಮುದ್ರೆಯನ್ನು ಹಾಕಬೇಕು.

ಪರ್ಯಾಯ ಇಖಾಮಾ ಮಂಜೂರಾತಿಗಾಗಿ ಅರ್ಜಿಯೊಂದಿಗೆ ಇತ್ತೀಚಿನ ಎರಡು ಬಣ್ಣದ ಭಾವಚಿತ್ರಗಳನ್ನು ಸಲ್ಲಿಸಬೇಕು. ಇಖಾಮಾ ಕಳೆದುಕೊಂಡರೆ 1,000 ರಿಯಾಲ್‌ಗಳ ದಂಡವನ್ನೂ ಪಾವತಿಸಬೇಕು. ಬೆರಳಚ್ಚು ಮತ್ತು ಕಣ್ಣಿನ ಐರಿಸ್ ಚಿತ್ರವನ್ನು ನೋಂದಾಯಿಸುವ ಅವಶ್ಯಕತೆಯಿದೆ ಎಂದು ಜವಾಝಾತ್ ನಿರ್ದೇಶನಾಲಯ ಸ್ಪಷ್ಟಪಡಿಸಿದೆ.